ರಾಷ್ಟ್ರೀಯ

ಹದಿಹರೆಯದ ಪ್ರೀತಿಗೆ ಸಹಪಾಠಿಗಳಿಂದಲೇ ಕೊಲೆಯಾದ ವಿದ್ಯಾರ್ಥಿ

Pinterest LinkedIn Tumblr

deepak

ಹೊಸದಿಲ್ಲಿ: ತ್ರಿಕೋನ ಪ್ರೇಮ ಕತೆಯಲ್ಲಿ ಸಿಲುಕಿದ್ದ ಹದಿಯರೆಯದ ಕಾಲೇಜು ವಿದ್ಯಾರ್ಥಿಯೊಬ್ಬನ ಮೃತದೇಹ ದಿಲ್ಲಿಯ ಹೊರವಲಯದ ಕಾಂಜವಾಲ ಗ್ರಾಮದಲ್ಲಿ ಪತ್ತೆಯಾಗಿದೆ. 19 ವರ್ಷದ ದೀಪಕ್‌ ಗುಲಿಯಾ ಎಂಬ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಕೊಲೆ ಮಾಡಿರುವುದು ಪತ್ತೆಯಾಗಿದ್ದು, ಈ ಕೃತ್ಯದ ಹಿಂದೆ ತ್ರಿಕೋನ ಪ್ರೇಮ ಕತೆ ಬಹಿರಂಗಗೊಂಡಿದೆ.

ತನ್ನ ಪ್ರೇಯಸಿಯನ್ನು ಓಲೈಸಲು ಪ್ರಯತ್ನಿಸಿದ ಸಹಪಾಠಿಯ ಮೇಲೆ ಕಳೆದ ಮೇನಲ್ಲಿ ದೀಪಕ್‌ ಹಲ್ಲೆ ನಡೆಸಿದ್ದ. ಅಲ್ಲದೆ ಆತನ ಕರೆ ಸ್ವೀಕರಿಸಿದ್ದಕ್ಕೆ ಪ್ರೇಯಸಿಗೆ ಛೀಮಾರಿ ಹಾಕಿದ್ದ. ಇದಕ್ಕೆ ಪ್ರತೀಕಾರವಾಗಿ ಕೊಲೆ ನಡೆದಿದ್ದು ಶುಕ್ರವಾರ ರಸ್ತೆಬದಿಯ ಪೊದೆಯಲ್ಲಿ ಆತನ ಹೆಣ ಸಿಕ್ಕಿದೆ.

ದೀಪಕ್‌ ಹಾಗೂ 17 ವರ್ಷದ ವಿದ್ಯಾರ್ಥಿ ಸೊನೆಪತ್‌ನ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು. ಹಾಗೂ ಅವರಿಬ್ಬರೂ ಒಂದೇ ಹಾಸ್ಟೆಲ್‌ನಲ್ಲಿ ವಾಸವಿದ್ದರು. ಶಾಲೆಗೆ ಬೇಸಿಗೆ ರಜೆ ಸಿಕ್ಕಾಗ ಇವರಿಬ್ಬರ ನಡುವೆ ಹುಡುಗಿ ವಿಚಾರದಲ್ಲಿ ಕಲಹ ನಡೆದಿದೆ.

ದೀಪಕ್‌ನ ತಂದೆ ಕೃಷ್ಣ ಗುಲಿಯಾ ನರೇಲ ಗ್ರಾಮದಲ್ಲಿ ಡೇರಿ ಉತ್ಪನ್ನಗಳ ಮಾರಾಟ ಅಂಗಡಿ ಇಟ್ಟುಕೊಂಡಿದ್ದು, ಗುರುವಾರ ರಾತ್ರಿ ಮಗ ಮನೆಗೆ ಬಾರದ್ದರಿಂದ ಆತಂಕಗೊಂಡಿದ್ದರು. ಅವರ ಕುಟುಂಬ ನರೇಲಾ ಪೊಲೀಸ್‌ ಠಾಣೆಗೆ ಧಾವಿಸಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು. ಪ್ರಶಾಂತ್‌ ವಿಹಾರ್‌ನ ಮಾಲ್‌ ಒಂದರಲ್ಲಿ ಗೆಳೆಯನ ಹುಟ್ಟುಹಬ್ಬಕ್ಕೆ ಹಾಜರಾಗಲು ಹೋಗುತ್ತಿರುವುದಾಗಿ ಹೇಳಿ ಮಗ ಮನೆ ಬಿಟ್ಟಿದ್ದ, ಆದರೆ ವಾಪಸ್‌ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.

ಆದರೆ ನಿಮ್ಮ ಮಗನನ್ನು ಅಪಹರಿಸಿದ್ದಾರೆ ಎಂದು ಮಗನ ಇನ್ನೊಬ್ಬ ಸ್ನೇಹಿತ ಅಜಯ್‌ ಎಂಬವನು ಶುಕ್ರವಾರ ಮುಂಜಾನೆ ಹೆತ್ತವರಿಗೆ ಮಾಹಿತಿ ನೀಡಿದ್ದಾನೆ. ಗೆಳೆಯರೇ ಅಪಹರಿಸಿದ್ದಾರೆ ಎಂದು ತಿಳಿಸಿದ್ದಾನೆ. ಗಾಬರಿಯಾದ ಹೆತ್ತವರು ಮತ್ತೆ ಪೊಲೀಸರ ಮೊರೆ ಹೋಗಿದ್ದು, ದೂರು ದಾಖಲಿಸಿದ್ದಾರೆ. ದೀಪಕ್‌ ಫೋನ್‌ ಸ್ವಿಚ್ಡ್‌ ಆಫ್‌ ಬರುತ್ತಿತ್ತು. ಶುಕ್ರವಾರ ಬೆಳಗ್ಗೆ ಸ್ಥಳೀಯರಿಗೆ ದೀಪಕ್‌ ಶವ ಸಿಕ್ಕಿತ್ತು.

ಗುರುವಾರ ರಾತ್ರಿ 12.30ಕ್ಕೆ ಹುಟ್ಟುಹಬ್ಬದ ಪಾರ್ಟಿ ಎಂದು ಸ್ನೇಹಿತೆಯರಲ್ಲಿ ಒಬ್ಬಳು ದೀಪಕ್‌ಗೆ ಕರೆಮಾಡಿದ್ದಳು. ಅಪರಾತ್ರಿಯಲ್ಲಿ ಮನೆಯಿಂದ ಹೊರಟಾಗ ಅದೇಕೋ ಆತ ಇನ್ನೊಬ್ಬ ಸ್ನೇಹಿತ ಅಜಯ್‌ನನ್ನೂ ಜತೆಗೆ ಕರೆದೊಯ್ದಿದ್ದಾನೆ. ಮಾಲ್‌ ಬಳಿ ದೀಪಕ್‌ ಕೈಯಲ್ಲಿ ಏಟು ತಿಂದಿದ್ದ ಹುಡುಗ ಸೇರಿದಂತೆ ಇನ್ನೂ ಕೆಲವರು ಕಾರೊಂದರಲ್ಲಿ ಕುಳಿತಿದ್ದರು. ಅಲ್ಲಿ ಅವರಿಬ್ಬರ ನಡುವೆ ಜಗಳ ಶುರುವಾಗಿದೆ. ಕಾರಿನಲ್ಲಿದ್ದವರು ದೀಪಕ್‌, ಅಜಯ್‌ನನ್ನು ಕಾರಿನೊಳಗೆ ಹಾಕಿ ಹೊತ್ತೊಯ್ದಿದ್ದಾರೆ. ಅಜಯ್‌ನನ್ನು ರಿತಾಲ ಮೆಟ್ರೋ ಸ್ಟೇಷನ್‌ ಬಳಿ ಇಳಿಸಿ ಅವರು ಮುಂದೆ ಹೋಗಿದ್ದಾರೆ. ಅಜಯ್‌, ದೀಪಕ್‌ ಮನೆಗೆ ಧಾವಿಸಿ ಮಾಹಿತಿ ನೀಡಿದ್ಧಾನೆ.

ಶುಕ್ರವಾರ ಬೆಳಗ್ಗೆ ದೀಪಕ್‌ ಶವ ಪತ್ತೆಯಾಗಿದೆ. ಒಬ್ಬ ಅಪ್ತಾಪ್ತ ಬಾಲಕ ಹಾಗೂ ಆತನ ಸ್ನೇಹಿತೆಯನ್ನು ಪೊಲೀಸರು ಪ್ರಕರಣದ ಸಂಬಂಧ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ದೀಪಕ್‌, ಸಹಪಾಠಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Write A Comment