ಭೂಪಾಲ್, ಜು.14: ಮಧ್ಯ ಪ್ರದೇಶದ ವೃತ್ತಿ ಶಿಕ್ಷಣ ಪರೀಕ್ಷೆ, ನೇಮಕಾತಿ ಅಕ್ರಮದ ವ್ಯಾಪಂ ಹಗರಣ ತೀರ ಕ್ಷುಲ್ಲಕ ಎಂದು ಬಣ್ಣಿಸಿರುವ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್‌ವರ್ಗಿಯಾ ಅವರು, ಈ ಹಗರಣದಿಂದ ಪಕ್ಷದ ನೈತಿಕ ಸ್ಥೈರ್ಯವೇನೂ ಕುಸಿದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಲೆಕ್ಕದಲ್ಲಿ ಇದೊಂದು (ವ್ಯಾಪಂ) ಚಟ್‌ಪುಟ್ (ಅತಿ ಸಣ್ಣ) ಹಗರಣ. ನಿಮಗೆಲ್ಲ ಅದು ದೊಡ್ಡದೇ ಇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿಜಯ್ ವರ್ಗಿಯಾ ಭೂಪಾಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಮಹಾ ಸಂಪರ್ಕ ಅಭಿಯಾನದ ಹಿನ್ನೆಲೆಯಲ್ಲಿ ಕೈಲಾಶ್ ವಿಜಯ್ ವರ್ಗಿಯಾ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರ ಬುದ್ಧೆ ಅವರು ಭೂಪಾಲ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು.
ಮಧ್ಯ ಪ್ರದೇಶದಲ್ಲಿ ನಡೆಯುವ ಈ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸಲಿದ್ದಾರೆ. ನಮ್ಮ ಮುಖ್ಯ ಕೆಲಸ ಮಹಾಸಂಪರ್ಕ್ ಅಭಿಯಾನ್. ಆ ಸಭೆಯಲ್ಲಿ ವ್ಯಾಪಂನಂತಹ ಸಣ್ಣ ವಿಷಯವನ್ನು ಚರ್ಚಿಸುವ ಅಗತ್ಯವಿಲ್ಲ ಎಂದು ವಿಜಯ್ ವರ್ಗಿಯಾ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದಾರೆ.
ವ್ಯಾಪಂ ಹಗರಣದಲ್ಲಿ ಇದುವರೆಗೆ ಸುಮಾರು 50 ಮಂದಿ ಅಮಾಯಕರು ನಿಗೂಢ ರೀತಿಯಲ್ಲಿ ಜೀವ ಕಳೆದುಕೊಂಡಿದ್ದು, ಪ್ರಮುಖವಾಗಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾಣ್, ರಾಜ್ಯಪಾಲ ರಾಮ್ ನರೇಶ್ ಯಾದವ್ ಹಾಗೂ ಕೇಂದ್ರ ಸಚಿವೆಯೊಬ್ಬರು ಭಾಗಿಯಾಗಿದ್ದಾರೆ ಎಂದು ಈಗಾಗಲೇ ಹೇಳಲಾಗಿದ್ದು, ಸರ್ವೋಚ್ಚ ನ್ಯಾಯಾಲಯ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಹಾಗೇ ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ಗಳನ್ನೂ ನೀಡಿದೆ. ಈಗಾಗಲೇ ಪ್ರಕರಣದಲ್ಲಿ ವಿದ್ಯಾರ್ಥಿಗಳು, ಪೋಷಕರು, ಅಧಿಕಾರಿಗಳು ಸೇರಿದಂತೆ 2500ಕ್ಕೂ ಹೆಚ್ಚು ಮಂದಿಯ ಬಂಧನವಾಗಿದೆ.