ಬರೇಲಿ: ರಂಜಾನ್ ಸಂದರ್ಭದಲ್ಲಿ ಭಯೋತ್ಪಾದನೆಯ ವಿರುದ್ಧ ದೇಶದ ಪ್ರಭಾವಿ ಮುಸ್ಲಿಂ ಧಾರ್ಮಿಕ ಕೇಂದ್ರ ದರ್ಗಾ ಅಲಾ ಹಜರತ್ ಹೊಸ ಫತ್ವಾ ಹೊರಡಿಸಿದೆ.
ಉಗ್ರರು ಹಾಗೂ ಉಗ್ರವಾದವನ್ನು ಬೆಂಬಲಿಸುವವರ ಅಂತ್ಯಕ್ರಿಯೆ ವೇಳೆ ಕಡೆಯ ಪ್ರಾರ್ಥನೆಗೆ ನಿರ್ಬಂಧ ವಿಧಿಸಿ ಫತ್ವಾ ಹೊರಡಿಸಲಾಗಿದೆ.
ಈದ್ ಸಂದರ್ಭದಲ್ಲಿ ಉಗ್ರರಿಗೆ ಕಠಿಣ ಸಂದೇಶ ರವಾನಿಸಿರುವ ಇಸ್ಲಾಂ ಧಾರ್ಮಿಕ ಕೇಂದ್ರದ ಮುಖಂಡರು, ಉಗ್ರರು ಹಾಗೂ ಉಗ್ರ ಸಂಘಟನೆ ನಂಟು ಹೊಂದಿರುವವರ ಅಂತ್ಯಕ್ರಿಯೆ ವೇಳೆ ‘ನಮಾಜೆ ಜನಜಾ’ ಪಠಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಇಸ್ಲಾಂನಲ್ಲಿ ಅಂತ್ಯಕ್ರಿಯೆ ವೇಳೆ ಸಲ್ಲಿಸುವ ಈ ಪ್ರಾರ್ಥನೆಗೆ ಬಹಳ ಮಹತ್ವವಿದೆ.
ಇಲ್ಲಿನ ಮಸೀದಿಯಲ್ಲಿ ವಿಶೇಷ ಈದ್ ಪ್ರಾರ್ಥನೆ ನಂತರ, ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಜನರಿಗೆ ಬಹಿಷ್ಕಾರ ಹಾಕಲು ಕರೆ ನೀಡಲಾಗಿದೆ. ‘ಉಗ್ರ ಸಂಘಟನೆಗಳೊಡನೆ ಯಾವುದೇ ರೀತಿಯಲ್ಲಿ ನಂಟು ಹೊಂದಿರುವ ಜನರ ಅಂತ್ಯಕ್ರಿಯೆಯಲ್ಲಿ ಮೌಲ್ವಿಗಳು, ಮುಫ್ತಿ ಅಥವಾ ಇನ್ನಿತರ ಧಾರ್ಮಿಕ ನಾಯಕರು ‘ನಮಾಜೆ ಜನಜಾ’ ಪಠಿಸುವುದಿಲ್ಲ,’ ಎಂದು ತಹ್ರೀಕೆ ತಹಫುಜ್ ಸುನ್ನಿಯತ್‌ನ ಪ್ರಧಾನ ಕಾರ್ಯದರ್ಶಿ ಮುಫ್ತಿ ಮೊಹಮ್ಮದ್ ಸಲೀಂ ನೂರಿ ಗುಡುಗಿದ್ದಾರೆ.