ಹೊಸದಿಲ್ಲಿ: ದೇಶದ ರಸ್ತೆಗಳು 2014ರಲ್ಲಿ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ಸರಾಸರಿ ಒಂದು ತಾಸಿನಲ್ಲಿ 16 ಸಾವು ಸಂಭವಿಸಿದೆ.
ಡೆಡ್ಲಿ ರಸ್ತೆ ಅಪಘಾತಗಳಲ್ಲಿ ಸುಮಾರು 1.41 ಲಕ್ಷ ಜನರು ಮೃತಪಟ್ಟಿದ್ದಾರೆ. 2013ರ ರಸ್ತೆ ಅಪಘಾತದ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ 2014ರಲ್ಲಿ ಶೇ. 3ರಷ್ಟು ಹೆಚ್ಚಾಗಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವವರ ಸಂಖ್ಯೆಯೂ ಹಿಂದಿನ ವರ್ಷದ ದಾಖಲೆಯನ್ನು ಮುರಿದಿದೆ. ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 2013ರಿಂದ 2014ಕ್ಕೆ 4.5 ಲಕ್ಷದಿಂದ 4.8ಕ್ಕೆ ಏರಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಅತಿ ವೇಗದ ಚಾಲನೆ ಹಾಗೂ ಅಪಾಯಕಾರಿ ಚಾಲನೆಯಿಂದ ಹೆಚ್ಚು ಅಪಘಾತಗಳು ಸಂಭವಿಸಿವೆ. ದ್ವಿ ಚಕ್ರವಾಹನಗಳು ಹಾಗೂ ಟ್ರಕ್ ಹಾಗೂ ಲಾರಿಗಳ ನಡುವೆ ಅಪಘಾತ ಸಂಭವಿಸಿ ಹೆಚ್ಚಿನ ಸಾವು ಸಂಭವಿಸಿವೆ.
13,787 ದ್ವಿಚಕ್ರ ವಾಹನ ಸವಾರರು ಅಪಘಾತಗಳಲ್ಲಿ ಮೃತಪಟ್ಟಿದ್ದರೆ, ಈ ಅಪಘಾತದಲ್ಲಿ ಭಾಗಿಯಾದ ಸುಮಾರು 23,529 ಮಂದಿ ಕೊನೆಯುಸಿರೆಳೆದಿದ್ದಾರೆ. ಸುಮಾರು 1.4 ಲಕ್ಷ ಮಂದಿ ಗಾಯಗೊಂಡಿದ್ದಾರೆ.
ವೇಗದ ಚಾಲನೆಯಿಂದ 1.7 ಲಕ್ಷ ಅಪಘಾತಗಳು, 49,000 ಸಾವು ಸಂಭವಿಸಿದೆ. ನಿರ್ಲಕ್ಷ್ಯದ ಚಾಲನೆ ಅಥವಾ ಓವರ್ ಟೇಕ್ ಮಾಡುವ ಭರದಲ್ಲಿ 1.4 ಲಕ್ಷ ಅಪಘಾತಗಳು ಸಂಭವಿಸಿ, 42,000 ಮಂದಿ ಮೃತಪಟ್ಟಿದ್ದಾರೆ.
ಟಾಪ್ 5 ರಾಜ್ಯಗಳು:
ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಸಾವು ಸಂಭವಿಸಿರುವ ರಾಜ್ಯಗಳ ಟಾಪ್ 5 ಪಟ್ಟಿಯಲ್ಲಿ ಕರ್ನಾಟಕವೂ ಸೇರಿದೆ ಎಂಬದು ಬೇಸರದ ಸಂಗತಿ. ಈ ರಾಜ್ಯಗಳಲ್ಲಿ ಶೇ.40ರಷ್ಟು ಸಾವು ಸಂಭವಿಸಿದೆ. ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಹಾಗೂ ರಾಜಸ್ಥಾನ ನಂತರದ ಸ್ಥಾನಗಳಲ್ಲಿವೆ. ಉತ್ತರ ಪ್ರದೇಶಕ್ಕಿಂತ ಸಣ್ಣ ರಾಜ್ಯವಾದ ತಮಿಳುನಾಡು ಒಂದರಲ್ಲೇ 15,000 ಸಾವು ಸಂಭವಿಸಿದೆ.