ಬೀಜಿಂಗ್: ‘ಹೋಟೆಲ್‌ವೊಂದರಲ್ಲಿ ಭಯೋತ್ಪಾನೆ ಹಾಗೂ ಧಾರ್ಮಿಕ ಉಗ್ರಗಾಮಿತ್ವಕ್ಕೆ ಪ್ರಚೋದನೆ ನೀಡುವ ವೀಡಿಯೋ ನೋಡಿದ ಆರೋಪದ ಮೇಲೆ ಬಂಧಿತರಾಗಿ, ಬಿಡುಗಡೆಯಾದವರಲ್ಲಿ 46 ವರ್ಷದ ಭಾರತೀಯ ಹಾಗೂ 19 ವಿದೇಶಿಯರು ‘ಕಾನೂನು ಬಾಹಿರ’ ಚಟುವಟಿಕೆಯಲ್ಲಿ ತೊಡಗಿದ್ದನ್ನು ಒಪ್ಪಿಕೊಂಡಿದ್ದಾರೆ,’ ಎಂದು ಚೀನಾ ಭಾನುವಾರ ಹೇಳಿದೆ.
‘ದಿಲ್ಲಿ ಮೂಲದ ವ್ಯಾಪಾರಸ್ಥ ರಾಜೀವ್ ಮೋಹನ್ ಕುಲಶ್ರೇಷ್ಠ ಅವರನ್ನು ಶನಿವಾರ ಭಾರತಕ್ಕೆ ಕಳುಹಿಸಲಾಗಿದೆ. ಇನ್ನುಳಿದ 19 ಮಂದಿಯಲ್ಲಿ ಬಹುತೇಕರು ಬ್ರಿಟಿಷ್ ಮತ್ತು ದಕ್ಷಿಣ ಆಫ್ರಿಕಾ ಪ್ರಜೆಗಳಿದ್ದು, ಅವರೆಲ್ಲರನ್ನೂ ಅವರವರ ದೇಶಕ್ಕೆ ತೆರಳಲು ಅನುವು ಮಾಡಿಕೊಡಲಾಗಿದೆ,’ ಎಂದು ಚೀನಾ ಸ್ಪಷ್ಟಪಡಿಸಿದೆ.
ಹೋಟೆಲ್ ಕೊಠಡಿಯೊಂದರಲ್ಲಿ ಕಾನೂನು ಬಾಹಿರ ವೀಡಿಯೋ ವೀಕ್ಷಿಸುತ್ತಿದ್ದವರನ್ನು ಉತ್ತರ ಚೀನಾದ ಇನ್ನರ್ ಮೊಂಗೋಲಿಯಾ ಆಟೋನೋಮಸ್ ಪ್ರಾಂತ್ಯದ ವಿದೇಶ ವ್ಯವಹಾರ ಕಚೇರಿಯಲ್ಲಿ ಇಡಲಾಗಿತ್ತು. ಘಟನೆ ನಡೆದ ನಂತರ ಇದೇ ಮೊದಲ ಬಾರಿಗೆ ಚೀನಾ ಈ ಬಗ್ಗೆ ವಿಸ್ತೃತ ಮಾಹಿತಿ ನೀಡಿದೆ.
ಬಂಧಿತರ ಬಿಡುಗಡೆ: ಮೊದಲಿಗೆ ಸಾಕ್ಷ್ಯಚಿತ್ರವೊಂದನ್ನು ವೀಕ್ಷಿಸುತ್ತಿದ್ದು, ಕೆಲವರು ಅಲ್ಲಿಂದ ತೆರಳಿದರು. ಉಳಿದವರು ನಂತರ ಭಯೋತ್ಪಾದನೆಯನ್ನು ಪ್ರಚೋದಿಸುವ ವೀಡಿಯೋ ವೀಕ್ಷಿಸುತ್ತಿದ್ದರು. ಆ ವೀಡಿಯೋ ತುಣುಕುಗಳು ದಕ್ಷಿಣ ಆಫ್ರಿಕಾ ಪ್ರಜೆಗೆ ಸೇರಿದ್ದ ಮೊಬೈಲ್‌ನಲ್ಲಿಯೂ ಇತ್ತು ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬಂಧಿತರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದನ್ನು ಒಪ್ಪಿಕೊಂಡಿದ್ದು, ತಮ್ಮ ಕೃತ್ಯಕ್ಕೆ ಪಶ್ಚತ್ತಾಪ ಪಟ್ಟಿದ್ದಾರೆ. ಅವರೆಡೆಗೆ ಮೃದು ಧೋರಣೆ ತಾಳಿದ ಪೊಲೀಸರು ಅವರ ಸ್ವದೇಶಗಳಿಗೆ ತೆರಳಲು ಆಯಾ ದೇಶದ ರಾಜತಾಂತ್ರಿಕ ಕಚೇರಿಗಳನ್ನು ಸಂಪರ್ಕಿಸಿ ಅನುವು ಮಾಡಿಕೊಟ್ಟಿದ್ದಾರೆ.
ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಅಶೋಕ್ ಕೆ ಕಾಂತಾ, ‘ಕುಲಶ್ರೇಷ್ಠ ಅವರನ್ನು ಯಾವ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು?,’ ಎಂಬ ವಿವರಣೆಯನ್ನು ಚೀನಾಕ್ಕೆ ಶನಿವಾರ ಕೇಳಿದ್ದಾರೆ.