ಶಿಲಾಂಗ್ : ಕಲಾಂ ತುಂಬ ನಡೆ ನುಡಿಯಲ್ಲಿ ಸಾದಾ ಸೀದಾ ಮನುಷ್ಯರಾಗಿದ್ದರು. ಅವರು ಶಿಲಾಂಗ್ ಐಐಎಂನಲ್ಲಿ ಭಾಷಣ ಮಾಡುವುದಕ್ಕೆ ಮುಂಚೆ ತಮ್ಮ ವಾಹನಕ್ಕೆ ಬೆಂಗಾವಲಾಗಿ ಬಂದ ರಕ್ಷಣಾ ಪಡೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಗುವಾಹಟಿಯಿಂದ ಶಿಲಾಂಗ್‌ಗೆ ಬರುವಾಗ ಪ್ರಯಾಣದುದ್ದಕ್ಕೂ ಈ ಸಿಬ್ಬಂದಿ ಅವರನ್ನು ಹಿಂಬಾಲಿಸಿತ್ತು. ಜಿಪ್ಸೆಯೊಂದರಲ್ಲಿ ಮೂವರು ಭದ್ರತಾ ಸಿಬ್ಬಂದಿ ಇದ್ದರು. ಅವರ ಪೈಕಿ ಒಬ್ಬರು ಗನ್ ಹಿಡಿದು ನಿಂತಿದ್ದರು.
ಇದನ್ನು ಕಂಡ ಕಲಾಂ ಮನಸ್ಸಿಗೆ ಕಸಿವಿಸಿಯಾಯಿತು. ಆ ಭದ್ರತಾ ಸಿಬ್ಬಂದಿಯನ್ನು ಕುಳಿತುಕೊಳ್ಳಲು ಹೇಳುವಂತೆ ಅವರು ಸೂಚಿಸಿದರು. ”ಈ ಕುರಿತು ನಾವು ರೇಡಿಯೋ ಸಂದೇಶ ಕೂಡ ಕಳುಹಿಸಿದೆವು ಆದರೆ ಅದು ಫಲಕೊಡಲಿಲ್ಲ,”ಎಂದು ಕಲಾಂ ಅವರ ಆಪ್ತ ಸಹಾಯಕ ಶ್ರಿಜನ್ ಪಾಲ್ ಸಿಂಗ್ ಹೇಳಿದ್ದಾರೆ.
ಕೊನೆಗೆ ಶಿಲಾಂಗ್ ತಲುಪಿದ ಕಲಾಂ, ಗನ್ ಹಿಡಿದು ನಿಂತಿದ್ದ ಯೋಧನನ್ನು ಕಾಣಬೇಕು ಎಂದರು. ಏನೋ ಲೋಪವಾಗಿದೆ ಎಂದು ಸಿಬ್ಬಂದಿ ಮೊದಲು ಹೆದರಿದರು. ಕೊನೆಗೆ ಎಸ್.ಎ.ಲೆಪಾಂಗ್ ಹೆಸರಿನ ಯೋಧನನ್ನು ಕರೆಸಲಾಯಿತು.
ತುಂಬ ದಣಿವಾಗಿದೆಯೇ? ಏನಾದರೂ ತಿನ್ನುತ್ತೀಯಾ? ನನ್ನಿಂದ ತುಂಬ ದೂರ ನೀನು ನಿಂತುಕೊಳ್ಳುವಂತಾಯಿತು. ಇದಕ್ಕಾಗಿ ಕ್ಷಮೆ ಕೇಳುವೆ ಎಂದು ಕಲಾಂ ಹೇಳಿದಾಗ ಆಶ್ಚರ್ಯ ಚಕಿತನಾದ ಆತ, ಸಾವರಿಸಿಕೊಂಡು ” ಸರ್ ಆಪ್‌ಕೆ ಲಿಯೆ ತೊ 6 ಗಂಟೆ ಭಿ ಖಡೆ ರಹೇಂಗೆ (ಸಾರ್ ನಿಮಗೋಸ್ಕರ ಆರು ಗಂಟೆ ಬೇಕಾದ್ರೂ ನಿಲ್ಲುವೆ) ಎಂದ.