ನವದೆಹಲಿ: ಪಂಜಾಬ್ ನ ಗುರ್ದಾಸ್ ಪುರದ ದೀನಾನಗರ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸಲು ಅಡ್ಡಿ ಉಂಟು ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಕಾಂಗ್ರೆಸ್ ನ ಕ್ಷುಲ್ಲಕ ರಾಜಕೀಯ ಆಸಕ್ತಿಯಿಂದಾಗಿ ಭಯೋತ್ಪಾದಕರ ದಾಳಿ ಬಗ್ಗೆ ಚರ್ಚೆಗೆ ಅಡ್ಡಿ ಉಂಟಾಗಿದೆ ಎಂದು ಹೇಳಿದ್ದಾರೆ.
ಗುರ್ದಾಸ್ ಪುರದಲ್ಲಿ ನಡೆದ ಭಯೋತ್ಪಾದಕರ ದಾಳಿ ಬಗ್ಗೆ ರಾಜ್ಯ ಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು. ಬಳಿಕ ಚರ್ಚೆ ನಡೆಯದೆಯೇ ದಿನದ ಕಲಾಪ ಮುಕ್ತಾಯಗೊಂಡು ಸಮಯ ವ್ಯರ್ಥವಾಯಿತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ನ ಉದ್ದೇಶವನ್ನು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಭದ್ರತೆಗಿಂತಲೂ ಕಾಂಗ್ರೆಸ್ ನ ಕ್ಷುಲ್ಲಕ ರಾಜಕೀಯ ಸ್ವಹಿತಾಸಕ್ತಿ ಮುಖ್ಯವೇ ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಅರುಣ್ ಜೇಟ್ಲಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಒಗ್ಗಟ್ಟಿನಿಂದಿರಲು ಪಕ್ಷದ ಸದಸ್ಯರಿಗೆ ಸೋನಿಯಾ ಗಾಂಧಿ ಸೂಚನೆ ನೀಡಲು ಸಾಧ್ಯವಿಲ್ಲವೇ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ಮಾತನಾಡಬೇಕಾದ ಅಗತ್ಯವಿರುವಾಗ ಕಾಂಗ್ರೆಸ್ ಸದನವನ್ನು ಒಡೆದಿದೆ. ಭಯೋತ್ಪಾದನೆ ವಿರುದ್ಧದ ವಿಷಯವನ್ನೂ ಕಾಂಗ್ರೆಸ್ ತನ್ನ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಂಡಿದೆ. ಕಾಂಗ್ರೆಸ್ ನಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸತ್ ಅಧಿವೇಶನ ಪ್ರಾರಂಭವಾದ ದಿನದಿಂದಲೂ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಲಾಪಕ್ಕೆ ನಿರಂತರವಾಗಿ ಅಡ್ಡಿ ಉಂಟಾಗುತ್ತಿದೆ.