ನವದೆಹಲಿ: ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ನವದೆಹಲಿ ಪೊಲೀಸರು ಇಬ್ಬರು ಏರ್ ಇಂಡಿಯಾ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಭೀಕರ ಭೂಕಂಪಕ್ಕೆ ತುತ್ತಾದ ನೇಪಾಳದ ಮಹಿಳೆಯರನ್ನು ಕಳ್ಳಸಾಗಣಿಕೆ ಮಾಡಲಾಗುತ್ತಿದ್ದ ಜಾಲ ಈ ಬಂಧನದ ಮೂಲಕ ಬಯಲಾಗಿದೆ.
ನವದೆಹಲಿಯ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೇಪಾಳಿ ಮಹಿಳೆಯರನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದ ಕಾರ್ಯಾಚರಣೆ ಬೆಳಕಿಗೆ ಬಂದಿದೆ. ಈ ವರೆಗೂ 28 ನೇಪಾಳಿ ಮಹಿಳೆಯರನ್ನು ಗುರುತಿಸಲಾಗಿದೆ.
ನವದೆಹಲಿಯಿಂದ ದುಬೈ ಗೆ ಹೊರಟಿದ್ದ ಮೊದಲ 7 ಜನರ ತಂಡದ ಮಹಿಳೆಯರ ಪ್ರಯಾಣ ದಾಖಲೆಗಳಿಗೆ ವಲಸೆ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ ಒಪ್ಪಿಗೆ ಸೂಚಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕಾಯ್ದೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ ಇರುವುದರಿಂದ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳ ಸಾಗಾಣಿಕೆ ನಡೆಸುತ್ತಿರುವ ಸಾಧ್ಯತೆಗಳ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಈ ವೇಳೆ ಏರ್ ಇಂಡಿಯಾ ಗ್ರೌಂಡ್ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರತಿ ಮಹಿಳೆಗೂ 90 ಡಾಲರ್ ನಂತೆ ಹಣ ಪಡೆದು ಪ್ರಯಾಣಕ್ಕೆ ಅನುಕೂಲವಾಗುವ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಮಹೇಶ್ ಗುಪ್ತಾ ಹಾಗೂ ಕಪಿಲ್ ಕುಮಾರ್ ಏರ್ ಇಂಡಿಯಾದ ಬಂಧಿತ ಸಿಬ್ಬಂದಿಗಳಾಗಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ನೇಪಾಳಿ ಪ್ರಜೆಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.