ಹೊಸದಿಲ್ಲಿ: 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಯಾಕುಬ್ ಮೆಮೊನ್‌ನ ಅಂತಿಮ ಅರ್ಜಿಯನ್ನು ತಿರಸ್ಕರಿಸಿದ ಮೂವರು ನ್ಯಾಯಾಧೀಶರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರಗಳಿಗೆ ನೀಡಲಾಗಿರುವ ಭದ್ರತೆಯನ್ನು ಗುರುವಾರ ಇನ್ನಷ್ಟು ಬಿಗಿಗೊಳಿಸುವ ನಿರ್ಧಾರಕ್ಕೆ ಬಂದಿದೆ.
ಗುರುವಾರವಷ್ಟೇ 53ನೇ ವರ್ಷಕ್ಕೆ ಕಾಲಿಟ್ಟಿದ್ದ ಯಾಕುಬ್, ಜನ್ಮದಿನದಂದೇ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಬೆಳಗ್ಗೆ 6.35ರ ಸುಮಾರಿಗೆ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದ. ಟಾಡಾ ಕೋರ್ಟ್ ಆತನಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೂ ಕಾನೂನಾತ್ಮಕವಾಗಿ ತನಗೆ ಲಭ್ಯವಿದ್ದ ಎಲ್ಲ ಅವಕಾಶಗಳನ್ನು ಬಳಸಿ ಯಾಕುಬ್ ಹೋರಾಟ ಮುಂದುವರಿಸಿದ್ದ.
ಶಿಕ್ಷೆ ಜಾರಿಗೆ ತಡೆ ಕೋರಿ ಮೆಮೊನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು ದ್ವಂದ್ವ ಆದೇಶ ನೀಡಿದ್ದರು. ನ್ಯಾಯಮೂರ್ತಿಗಳಾದ ಎ.ಆರ್.ದವೆ ಹಾಗೂ ಕುರಿಯನ್ ಜೋಸೆಫ್ ಅವರಿದ್ದ ಪೀಠ ಭಿನ್ನ ನಿಲುವು ತಾಳಿದ್ದಲ್ಲದೆ ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು ಮುಖ್ಯನ್ಯಾಯಮುರ್ತಿ ಎಚ್.ದತ್ತು ಅವರಿಗೆ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ದೀಪಿಕ್ ಮಿಶ್ರಾ, ಪ್ರಫುಲ್ಲಾ ಸಿ. ಪಂತ ಹಾಗೂ ಅಮಿತ್ವ ರಾಯ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ಮುಖ್ಯ ನ್ಯಾಯಮೂರ್ತಿ ರಚಿಸಿದ್ದರು. ಯಾಕೂಬ್‌ಗೆ ಮರಣದಂಡನೆಯೇ ಸರಿ ಎಂಬ ಟಾಡಾ ನ್ಯಾಯಾಲಯದ ತೀರ್ಪನ್ನು ತ್ರಿಸದಸ್ಯ ಪೀಠವು ಎತ್ತಿ ಹಿಡಿದಾಗಲೇ ಯಾಕುಬ್ ಮೆಮೊನ್ ಹಣೆಬರಹ ಬಹುತೇಕ ನಿರ್ಧಾರವಾಗಿತ್ತು.
ಇದೀಗ ಅಂತಿಮ ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳಿಗೆ ಬಿಗಿ ಭದ್ರತೆ ನೀಡಿ ರಕ್ಷಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.