ಹೊಸದಿಲ್ಲಿ: ಹಿಂದು ಟೆರರಿಸ್ಟ್ ಎನ್ನುವ ಪದ ಸೃಷ್ಟಿಸಿ ಭಯೋತ್ಪಾದನೆ ವಿರುದ್ಧದ ದೇಶದ ನೀತಿಯನ್ನು ಯುಪಿಎ ಸರಕಾರ ದುರ್ಬಲಗೊಳಿಸಿತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಪಂಜಾಬ್‌ನ ಗುರುದಾಸಪುರದಲ್ಲಿ ಗುರುವಾರ ನಡೆದಿದ್ದ ಉಗ್ರರ ದಾಳಿ ಸಂಬಂಧ ಲೋಕಸಭೆಯಲ್ಲಿ ಶುಕ್ರವಾರ ಸರಕಾರದ ಪರ ಹೇಳಿಕೆಯನ್ನು ಮಂಡಿಸುತ್ತ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭಯೋತ್ಪಾದನೆ ಮಟ್ಟ ಹಾಕುವ ನೀತಿಯನ್ನು ದುರ್ಬಲಗೊಳಿಸಿದ್ದನ್ನು ನೆನಪಿಸಿದರು.
ಲೋಕಸಭೆಯ ಉಭಯ ಸದನಗಳಲ್ಲೂ ಪಂಜಾಬ್‌ನಲ್ಲಿ ನಡೆದಿದ್ದ ಉಗ್ರರ ದಾಳಿ ಪ್ರಕರಣ ಪ್ರತಿಫಲನಗೊಂಡಿತು. ಪ್ರತಿಪಕ್ಷಗಳು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಗದ್ದಲ ಉಂಟಾಯಿತು.
ಭಯೋತ್ಪಾದನೆ ಅನ್ನುವುದು ಭಯೋತ್ಪಾದನೆ, ಅಷ್ಟೇ. ಅದಕ್ಕೆ ಯಾವುದೇ ಜಾತಿ, ಧರ್ಮ ಇಲ್ಲ. ರಾಷ್ಟ್ರಕ್ಕೆ ಅತಿ ದೊಡ್ಡ ಸವಾಲಾಗಿರುವ ಭಯೋತ್ಪಾದನೆ ವಿಷಯದಲ್ಲಿ ದೇಶವಾಗಲಿ ಸಂಸತ್ತಾಗಲಿ ವಿಭಾಗವಾಗುವುದು ಸರಿಯಲ್ಲ. ದೇಶ ಈ ವಿಚಾರದಲ್ಲಿ ಒಗ್ಗಟ್ಟಾಗಿರಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.
ಒಂದೆಡೆ ಭದ್ರತಾ ಪಡೆಗಳ ಸಿಬ್ಬಂದಿ ದೇಶದ ವಿರುದ್ಧ ಉಗ್ರರು ನಡೆಸುತ್ತಿರುವ ದಾಳಿಗೆ ಹುತಾತ್ಮರಾಗುತ್ತಿದ್ಧಾರೆ. ಇನ್ನೊಂದೆಡೆ ಸಂಸತ್ ಸದಸ್ಯರು ಈ ವಿಚಾರ ಚರ್ಚಿಸುವಾಗ ಗದ್ದಲ ಮಾಡುತ್ತಿದ್ಧಾರೆ ಎಂದ ಸಿಂಗ್, ಈ ವಿಚಾರದಲ್ಲಿ ಸರಕಾರ ಚರ್ಚೆಗೆ ಸಿದ್ಧವಿದ್ದು, ಎಂಥ ಪ್ರಶ್ನೆಗಳಿದ್ದರೂ ಉತ್ತರಿಸುವುದಾಗಿ ಭರವಸೆ ನೀಡಿದರು.
ದೇಶದಿಂದ ಭಯೋತ್ಪಾದನೆಯನ್ನು ಕಿತ್ತೊಗೆಯುವ ಹೋರಾಟಕ್ಕೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಟಿಬದ್ಧರಾಗಿದ್ದಾರೆ ಎಂದು ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದರು. ಗಡಿ ಭಾಗದಲ್ಲಿನ ಭಯೋತ್ಪಾದನೆಯನ್ನೂ ಮಟ್ಟ ಹಾಕುವ ಭರವಸೆ ನೀಡಿದರು.