ಹೊಸದಿಲ್ಲಿ: ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 24,771 ವರದಕ್ಷಿಣೆ ಸಂಬಂಧಿ ಸಾವುಗಳು ಸಂಬಂಧಿಸಿದ್ದು, 7,048 ಸಾವುಗಳೊಂದಿಗೆ, ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.
2012ರಲ್ಲಿ 8,233, 2013ರಲ್ಲಿ 8,083 ಮತ್ತು 2014ರಲ್ಲಿ 8,455 ವರದಕ್ಷಿಣೆ ಸಾವಿನ ಪ್ರಕರಣ(ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ಬಿ)ಗಳು ದಾಖಲಾಗಿವೆ, ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಉತ್ತರ ಪ್ರದೇಶದ ನಂತರ ಬಿಹಾರದಲ್ಲಿ 3,830 ಮತ್ತು ಮಧ್ಯಪ್ರದೇಶದಲ್ಲಿ 2,252 ವರದಕ್ಷಿಣೆ ಸಾವಿನ ಪ್ರಕರಣಗಳು ದಾಖಲಾಗಿವೆ, ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಅಂಕಿ ಅಂಶಗಳ ಪ್ರಕಾರ ಇದೇ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಪತಿ ಅಥವಾ ಆತನ ಸಂಬಂಧಿಕರು ಹಿಂಸೆ ನೀಡಿದ ಒಟ್ಟು 3.48 ಪ್ರಕರಣಗಳು ದಾಖಲಾಗಿದ್ದು, ಪಶ್ಚಿಮ ಬಂಗಾಳ ಒಂದರಲ್ಲಿಯೇ ಒಟ್ಟು 61,259 ಪ್ರಕರಣಗಳು ದಾಖಲಾಗಿವೆ. ನಂತರ ರಾಜಸ್ಥಾನ (44,311) ಮತ್ತು ಆಂಧ್ರಪ್ರದೇಶ (34,835) ರಾಜ್ಯಗಳಿವೆ.
‘ವರದಕ್ಷಿಣೆ ತಡೆ ಕಾಯ್ದೆ ಸೇರಿದಂತೆ ಮಹಿಳೆಯರ ರಕ್ಷಣಾ ಕಾನೂನುಗಳ ಬಗ್ಗೆ ಕಾರ್ಯಾಗಾರಗಳು, ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸರಕಾರ ಅರಿವು ಮೂಡಿಸುತ್ತಿದೆ,’ ಎಂದು ಮೇನಕಾ ಹೇಳಿದ್ದಾರೆ.