ಗಯಾ (ಬಿಹಾರ): ಈ ಬ್ಯಾಂಕಿಗೆ ರಜೆ ಎಂಬುದೇ ಇಲ್ಲ. ಸಾಲ ಪಡೆಯಲು ಯಾವುದೇ ಕಾಗದ ಪತ್ರ ಬೇಕಿಲ್ಲ. ಹಣದ ಅವಶ್ಯಕತೆ ಇದ್ದರೆ ನಡು ರಾತ್ರಿಯಲ್ಲೂ ಸಿಗುತ್ತದೆ. ಆದರೆ ಇದು ಎಲ್ಲರಿಗೂ ಅಲ್ಲ. ಇಲ್ಲಿ ಸದಸ್ಯತ್ವ ಪಡೆಯಬೇಕೆಂದರೇ ಭಿಕ್ಷುಕರಾಗಿರುವುದು ಕಡ್ಡಾಯ.
ಹೌದು ! ಇಂತದೊಂದು ಬ್ಯಾಂಕ್ ಬಿಹಾರದ ಗಯಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಬ್ಯಾಂಕ್ ಮ್ಯಾನೇಜರ್, ಕಾರ್ಯದರ್ಶಿ ಹಾಗೂ ಖಜಾಂಚಿ ಮೂವರೂ ಭಿಕ್ಷುಕರೇ. ಇಲ್ಲಿ ಸದಸ್ಯತ್ವ ಹೊಂದಿರುವ ಎಲ್ಲರೂ ಸಹ ಭಿಕ್ಷುಕರು. ದೇವಾಲಯದ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಇವರುಗಳು ಇತರೆ ಭಿಕ್ಷುಕರೊಂದಿಗೆ ಸಂಘಟಿತರಾಗಿ ಈ ಬ್ಯಾಂಕ್ ಸ್ಥಾಪಿಸಿಕೊಂಡಿದ್ದಾರೆ.
‘ಮಂಗಳ ಬ್ಯಾಂಕ್’ ಎಂದು ಭಿಕ್ಷುಕರು ಇದಕ್ಕೆ ನಾಮಕರಣ ಮಾಡಿದ್ದು, ಸದ್ಯ 40 ಭಿಕ್ಷುಕರು ಈ ಬ್ಯಾಂಕಿನ ಸದಸ್ಯರಾಗಿದ್ದಾರೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಬ್ಯಾಂಕಿನ ಮ್ಯಾನೇಜರ್ ರಾಜಕುಮಾರ್ ಮಾಂಜಿ ಮುಂದಾಗಿದ್ದಾನೆ. ಇಲ್ಲಿನ ಸದಸ್ಯರೆಲ್ಲರೂ ಗಯಾದ ಪ್ರಸಿದ್ದ ಮಂಗಳಗೌರಿ ದೇವಾಲಯದ ಮುಂದೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಇದಕ್ಕೆ ‘ಮಂಗಳ ಬ್ಯಾಂಕ್’ ಎಂದು ಹೆಸರಿಡಲಾಗಿದೆ.
ಇಲ್ಲಿ ಸದಸ್ಯರಾಗಿರುವ ಪ್ರತಿಯೊಬ್ಬ ಭಿಕ್ಷುಕ ವಾರಕ್ಕೊಮ್ಮೆ 20 ರೂ.ಗಳನ್ನು ಠೇವಣಿಯಾಗಿಡಬೇಕು. ಇದು ಪ್ರತಿ ವಾರಕ್ಕೆ 800 ರೂ. ಮೊತ್ತವಾಗುತ್ತಿದ್ದು ಅವಶ್ಯಕತೆ ಇದ್ದವರಿಗೆ ನೀಡಲಾಗುತ್ತದೆ. ಯಾರಿಗೂ ಅಗತ್ಯವಿಲ್ಲದಿದ್ದರೆ ಅದನ್ನು ಹಾಗೆಯೇ ಕೂಡಿಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ಸದಸ್ಯ ಭಿಕ್ಷುಕನೊಬ್ಬನ ಕುಟುಂಬ ಸದಸ್ಯರು ಆನಾರೋಗ್ಯಕ್ಕೊಳಗಾದಾಗ ಬ್ಯಾಂಕಿನಲ್ಲಿ ಕೂಡಿಟ್ಟ ಹಣ 8 ಸಾವಿರ ರೂ. ಗಳನ್ನು ತಕ್ಷಣವೇ ನೀಡಲಾಗಿದೆ. ಮರು ಪಾವತಿಗೂ ನಿಯಮಗಳಿದ್ದು, ಬಡ್ಡಿ ಮಾತ್ರ ಪಡೆಯುತ್ತಿಲ್ಲ.