ನವದೆಹಲಿ, ಜು.31 -ಲಲಿತ್ಮೋದಿ ವಿವಾದ ಹಾಗೂ ವ್ಯಾಪಂ ಹಗರಣದ ವಿರುದ್ಧ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿ ತೀವ್ರ ಕೋಲಾಹಲ ಉಂಟಾಯಿತು. 9ನೇ ದಿನವೂ ಕಲಾಪ ಸುಗಮವಾಗಿ ನಡೆಯಲಿಲ್ಲ. ಮುಂಗಾರು ಅಧಿವೇಶನದ 9 ದಿನಗಳ ಕಲಾಪಕ್ಕೆ ಬರೋಬ್ಬರಿ 81 ಕೋಟಿ ರೂ. ಖರ್ಚಾಗಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳ ಸದಸ್ಯರು ಮೋದಿ ವಿವಾದ ಹಾಗೂ ವ್ಯಾಪಂ ಹಗರಣದಲ್ಲಿ ಭಾಗಿಯಾದವರು ಕೂಡಲೇ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಾಗ ಭಾರೀ ಕೋಲಾಹಲ ಉಂಟಾಗಿ ಸದಸ್ಯರು ಪರಸ್ಪರ ವಾಗ್ವಾದಕ್ಕಿಳಿದರು.
ಸುಗಮ ಕಲಾಪ ನಡೆಸುವಂತೆ ಸ್ಪೀಕರ್ ಸುಮಿತ್ರ ಮಹಾಜನ್ ಪರಿಪರಿಯಾಗಿ ವಿನಂತಿಸಿಕೊಂಡರೂ ಯಾವುದೆ ಪ್ರಯೋಜನವಾಗಲಿಲ್ಲ. ಇಡೀ ಸದನವೇ ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು.
ಗಲಾಟೆಯ ನಡುವೆಯೇ ಮಧ್ಯೆ ಪ್ರವೇಶಿಸಿದ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಸದಸ್ಯರ ಪ್ರತಿಭಟನಾ ಧೋರಣೆಯನ್ನು ಖಂಡಿಸಿ, ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು. ಕಳಂಕಿತ ಸಚಿವರನ್ನು ಕೈಬಿಡುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದ ಸದಸ್ಯರು ಮೊದಲು ರಾಜೀನಾಮೆ ನೀಡಲಿ, ನಂತರ ಚರ್ಚೆ ಮಾಡೋಣ ಎಂದು ಪ್ರತಿಭಟನೆಯನ್ನು ಮುಂದುವರೆಸಿದರು.