ಹೊಸದಿಲ್ಲಿ,ಆ.2: ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2015ರ ಮೊದಲ ಆರು ತಿಂಗಳುಗಳಲ್ಲಿ ದೇಶದಲ್ಲಿ ಕೋಮು ಹಿಂಸಾಚಾರದ ಘಟನೆಗಳಲ್ಲಿ ಏರಿಕೆಯಾಗಿದೆ. ಈ ವರ್ಷದ ಜೂನ್ವರೆಗೆ 330 ಕೋಮುದಂಗೆ ಪ್ರಕರಣಗಳು ವರದಿಯಾಗಿದ್ದು ಇವುಗಳಲ್ಲಿ 51ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತರ 1,092 ಜನರು ಗಾಯಗೊಂಡಿದ್ದಾರೆ. ಕಳೆದ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ 252 ಕೋಮು ಹಿಂಸಾಚಾರದ ಘಟನೆಗಳು ನಡೆದಿದ್ದು,33 ಜೀವಗಳು ಬಲಿಯಾಗಿದ್ದವು.
ಗೃಹ ಸಚಿವಾಲಯದ ಮಾಹಿತಿಯಂತೆ ಇಡೀ 2014ರಲ್ಲಿ 644 ಕೋಮು ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದು, 99 ಜನರು ಸಾವನ್ನಪ್ಪಿ ಇತರ 1,921 ಜನರು ಗಾಯಗೊಂಡಿದ್ದರು.
ಎಸ್ಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು…68 ಕೋಮುಹಿಂಸೆಯ ಘಟನೆಗಳು ನಡೆದಿದ್ದು,10ಜನರು ಕೊಲ್ಲಲ್ಪಟ್ಟು 224 ಜನರು ಗಾಯಗೊಂಡಿದ್ದಾರೆ. ಜೆಡಿಯು ಆಡಳಿತದ ಬಿಹಾರದಲ್ಲಿ ಈ ವರ್ಷ ಜೂನ್ವರೆಗೆ 41 ಕೋಮುಹಿಂಸೆಯ ಘಟನೆಗಳಲ್ಲಿ 14 ಜನರು ಸತ್ತು,169ಜನರು ಗಾಯಗೊಂಡಿದ್ದಾರೆ. ಬಿಜೆಪಿ ಆಡಳಿತದ ಗುಜರಾತ್ನಲ್ಲಿ ಕೋಮುಹಿಂಸೆಯ 25 ಘಟನೆಗಳಲ್ಲಿ ಏಳು ಜನರು ಕೊಲ್ಲಲ್ಪಟ್ಟಿದ್ದು,ಇತರ 79 ಜನರು ಗಾಯಗೊಂಡಿದ್ದಾರೆ. ಬಿಜೆಪಿ ಆಡಳಿತದ ಇನ್ನೊಂದು ರಾಜ್ಯ ಮಹಾರಾಷ್ಟ್ರದಲ್ಲಿ ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ 59 ಕೋಮುಹಿಂಸೆ ಘಟನೆಗಳಲ್ಲಿ ನಾಲ್ವರು ಬಲಿಯಾಗಿದ್ದು, 196 ಜನರು ಗಾಯಗೊಂಡಿದ್ದಾರೆ.
ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಇಂತಹ 36 ಘಟನೆಗಳು ವರದಿಯಾಗಿದ್ದು,ಇಬ್ಬರು ಮೃತಪಟ್ಟು ಇತರ 123 ಜನರು ಗಾಯಗೊಂಡಿದ್ದಾರೆ.