ರಾಷ್ಟ್ರೀಯ

ಗಲ್ಲುಶಿಕ್ಷೆಗೆ ತರೂರ್ ಮತ್ತೆ ವಿರೋಧ: ‘ಮರಣದಂಡನೆ ಒಂದು ಸವಕಲು ಪದ್ಧತಿ’

Pinterest LinkedIn Tumblr

Shashi-Tharoorತಿರುವನಂತಪುರಂ,ಆ.2: ಗಲ್ಲು ಶಿಕ್ಷೆ ವಿರೋಧಿಸಿ ತಾನು ನೀಡಿದ್ದ ಹೇಳಿಕೆಗೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿದ್ದರೂ, ವಿಚಲಿತರಾಗದ ಮಾಜಿ ಕೇಂದ್ರ ಸಚಿವ ಶಶಿತರೂರ್, ಗಲ್ಲು ಶಿಕ್ಷೆಯು ಒಂದು ಸವಕಲು ಪದ್ಧತಿಯೆಂದು ಹೇಳಿದ್ದಾರೆ. ಭಯೋತ್ಪಾದಕರಿಗೂ ಕೂಡಾ ಮರಣದಂಡನೆ ವಿಧಿಸುವು ದನ್ನು ತಾನು ವಿರೋಧಿಸುವೆ. ಗಲ್ಲಿಗೇರಿಸುವ ಬದಲಿಗೆ ಅವರನ್ನು ಜೀವನಪರ್ಯಂತ ಪೆರೋಲ್ ಇಲ್ಲದೆ ಜೈಲಿನಲ್ಲಿಯೇ ಇರಿಸಬೇಕೆಂದು ಅವರು ಪ್ರತಿಪಾದಿಸಿದ್ದಾರೆ.
ಪರಿಸರವಾದಿ ಸಂಘಟನೆಯಾದ ‘ಟ್ರವಾಕ್’ ರವಿವಾರ ತಿರುವನಂತಪುರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
‘‘ಭಯೋತ್ಪಾದಕರನ್ನು ಪೆರೋಲ್ ಇಲ್ಲದೆ ಜೀವಮಾನವಿಡೀ ಜೈಲಿನಲ್ಲಿಡಬೇಕು. ವ್ಯಕ್ತಿಯೊಬ್ಬ ಯಾರನ್ನಾದರೂ ಕೊಲೆ ಮಾಡಿದರೆ ಆತನನ್ನೂ ಕೊಲ್ಲಬೇಕೆಂಬ ನಂಬಿಕೆ ಹಿಂದಿನ ಕಾಲದಲ್ಲಿತ್ತು. ಈ ಸವಕಲು ಪದ್ಧತಿಯನ್ನು ನಾವು ಈಗ ಯಾಕೆ ಅನುಸರಿಸಬೇಕು’’ ಎಂದು ತರೂರ್ ಪ್ರಶ್ನಿಸಿದರು.
‘‘ಮರಣದಂಡನೆ ಜಾರಿಗೊಳಿಸಿದರೆ ವಾಸ್ತವವಾಗಿ ನಾವು ಕೂಡಾ ಅವರಂತೆ (ಹಂತಕ)ಯೇ ವರ್ತಿಸಿದಂತಾಗುತ್ತದೆ. ಸರಕಾರ ಕೊಲೆಪಾತಕಿಗಳ ಹಾಗೆ ವರ್ತಿಸಕೂಡದು’’ಎಂದರು.
ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ್ದರ ಕುರಿತಾಗಿ ತಾನು ಟ್ವಿಟ್ಟರ್‌ನಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತರೂರ್, ‘‘ಮೆಮನ್ ಪ್ರಕರಣದ ಬಗ್ಗೆ ತಾನು ಒಂದೇ ಒಂದು ಮಾತನ್ನೂ ಆಡಿಲ್ಲವೆಂದು ಸ್ಪಷ್ಟಪಡಿಸಿದರು. ‘‘ಮೆಮನ್ ಪ್ರಕರಣದ ಬಗ್ಗೆ ನಾನು ಒಂದೇ ಒಂದು ಮಾತನ್ನೂ ಆಡಿಲ್ಲ ಮತ್ತು ಯಾವುದೇ ಪ್ರಕರಣವನ್ನು ವಿಮರ್ಶಿಸುವ ಗೋಜಿಗೆ ಹೋಗಿಲ್ಲ. ಹಾಗೆ ಮಾಡುವುದು ಸುಪ್ರೀಂಕೋರ್ಟ್‌ನ ಕೆಲಸವಾಗಿದೆ. ನಾನು ಹಳೆಯ ಪದ್ಧತಿಯಾದ ಗಲ್ಲು ಶಿಕ್ಷೆಯನ್ನು ಈಗಲೂ ಮುಂದುವರಿಸಿರುವ ವಿರುದ್ಧ ಟ್ವೀಟ್ ಮಾಡಿದ್ದೆ ಎಂದರು.
ತಾನು ಮಾತ್ರವಲ್ಲದೆ, ವಿವಿಧ ಪಕ್ಷಗಳ ನಾಯಕರಾದ ಸೀತಾರಾಮ್ ಯಚೂರಿ, ಡಿ.ರಾಜಾ, ಕನಿಮೋಳಿ, ಶತ್ರು ಘ್ನಸಿನ್ಹಾ ಹಾಗೂ ವರುಣ್‌ಗಾಂಧಿ ಕೂಡಾ ಮರಣದಂಡನೆಯ ರದ್ದತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದರು.
ಈಗಾಗಲೇ 145 ದೇಶಗಳು ಮರಣದಂಡನೆಯನ್ನು ರದ್ದುಪಡಿಸಿವೆ ಹಾಗೂ ಇನ್ನೂ 25 ರಾಷ್ಟ್ರಗಳಲ್ಲಿ ಮರಣದಂಡನೆ ಕಾನೂನಿದ್ದರೂ ಅದನ್ನು ಅನುಸರಿಸುತ್ತಿಲ್ಲ. ಕೇವಲ 35 ದೇಶಗಳಲ್ಲಿ ಮಾತ್ರ ಅದು ಜಾರಿಯಲ್ಲಿದೆ. ಇಂತಹ ಸವಕಲು ಪದ್ಧತಿಯನ್ನು ಸರಕಾರ ಯಾಕೆ ಅನುಸರಿಸಬೇಕು ಎಂದು ತರೂರ್ ಪ್ರಶ್ನಿಸಿದರು.

Write A Comment