ವಾರಾಣಸಿ: ಕಲಾಪ ವ್ಯರ್ಥವಾಗಿ ಕಳೆದುಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದರಷ್ಟೇ ಸಂಸದರಿಗೆ ಪಗಾರ. ಇಲ್ಲದಿದ್ದರೆ ಇಲ್ಲ ಎಂಬ ನಿಯಮ ಜಾರಿ ತರಲು ಸರಕಾರ ಚಿಂತನೆ ನಡೆಸಿದೆ.
‘ಕೆಲಸ ಮಾಡದಿದ್ದರೆ ನೌಕರ ವರ್ಗದವರಿಗೆ ಸಂಬಳ ದೊರೆಯದು. ಅದೇ ರೀತಿಯಲ್ಲಿ ಸಂಸತ್ತಿನಲ್ಲಿ ಕೆಲಸ ಮಾಡದ ಸಂಸದರ ವೇತನ ಸ್ಥಗಿತಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸುವುದನ್ನು ತಪ್ಪಿಸಲು ಇದು ಉತ್ತಮ ಉಪಾಯ,’ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಮನೀಶ್ ಶರ್ಮ ಹೇಳಿದ್ದಾರೆ.
ಲಲಿತ್ ಗೇಟ್ ಹಗರಣದ ಸಂಬಂಧ ಸುಷ್ಮಾ ಸ್ವರಾಜ್ , ರಾಜಸ್ಥಾನ ಸಿಎಂ ವಸುಂಧರಾ ರಾಜೆ ಹಾಗೂ ವ್ಯಾಪಂ ಹಗರಣ ಸಂಬಂಧ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದರೂ, ನಿಲುವು ಸಡಿಲಿಸದ ಆಡಳಿತ ಪಕ್ಷದ ಬಿಗಿಪಟ್ಟಿನಿಂದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ವಾರದ ಕಲಾಪ ವ್ಯರ್ಥವಾಗಿದೆ. ಆ ಮೂಲಕ ಜನರ ತೆರಿಗೆ ಹಣ 260 ಕೋಟಿ ರೂ. ಪೋಲಾಗಿದೆ.
ಐತಿಹಾಸಿಕ ಸ್ಮಾರಕಗಳ ಕುರಿತು ಮೊಬೈಲ್ ಆ್ಯಪ್ ಅನಾವರಣಗೊಳಿಸಲು ವಾರಾಣಸಿಗೆ ಆಗಮಿಸಿದ್ದ ಶರ್ಮ, ಗದ್ದಲದಿಂದ ಸಂಸತ್ ಕಲಾಪ ಸ್ಥಗಿತಗೊಂಡಿರುವ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ವ್ಯರ್ಥ ಕಲಾಪಕ್ಕೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳನ್ನು ದೂರಿರುವ ಶರ್ಮ, ‘ಬೌದ್ಧಿಕವಾಗಿ ದಿವಾಳಿ ಆಗಿರುವ ಕಾಂಗ್ರೆಸ್ ಬಳಿ ಸಂಸತ್ತಿನಲ್ಲಿ ಪ್ರಸ್ತಾಪಿಸಬಹುದಾದಂಥ ಯಾವ ಸೂಕ್ತ ವಿಷಯವೂ ಇಲ್ಲ. ಸಂಸತ್ತಿನಲ್ಲಿ ಗಂಭೀರ ವಿಷಯಗಳು ಚರ್ಚೆ ಆಗಬೇಕು. ಆದರೆ, ಅಂಥ ಚರ್ಚೆ ಆಗುತ್ತಿಲ್ಲ,’ ಎಂದರು.