ನವದೆಹಲಿ: ಸಂಸತ್ ನಲ್ಲಿ ಜಿ.ಎಸ್.ಟಿ ಮಸೂದೆ ಅಂಗೀಕಾರ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಸಂಸತ್ ನಲ್ಲಿ ಉಂಟಾಗುತ್ತಿರುವ ಪ್ರತಿರೋಧಕ ಪ್ರವೃತ್ತಿ ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವೇ ರೂಪುಗೊಳಿಸಿದ್ದ ಜಿ.ಎಸ್.ಟಿ ಕಾಯ್ದೆ ಜಾರಿಗೆ ಈಗ ಕಾಂಗ್ರೆಸ್ಸೇ ಅಡ್ಡಿ ಉಂಟು ಮಾಡುತ್ತಿದೆ. ಕಾಂಗ್ರೆಸ್ ತಯಾರಿಸಿದ್ದ ಜಿ.ಎಸ್.ಟಿ ಕಾಯ್ದೆಯಲ್ಲಿ ಎನ್.ಡಿ.ಎ ಸರ್ಕಾರ ಮಹತ್ವದ ಬದಲಾವಣೆಗಳನ್ನು ಮಾಡಿಲ್ಲ ಎಂದು ಆದರೂ ವ್ಯಕ್ತವಾಗುತ್ತಿರುವ ವಿರೋಧದಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದಾರೆ. ಉತ್ಪಾದನೆ ಹಾಗೂ ಬಳಕೆ ಮಾಡುವ ರಾಜ್ಯಗಳ ನಡುವೆ ಒಮ್ಮತ ಮೂಡಿಸುವುದನ್ನು ಹೊರತುಪಡಿಸಿ ಬದಲಾವಣೆಗಳನ್ನು ತರಲಾಗಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮಾಡಿರುವ ಕೆಲ ಬದಲಾವಣೆಗಳಿಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳೇ ಬೆಂಬಲ ಸೂಚಿಸಿವೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿರೋಧಕ ಪ್ರವೃತ್ತಿ ತೋರುತ್ತಿದೆ ಎಂದು ಜೇಟ್ಲಿ ಕಿಡಿಕಾರಿದ್ದಾರೆ. ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್ ಪಕ್ಷ ಲಲಿತ್ ಮೋದಿ ಪ್ರಕರಣ, ವ್ಯಾಪಂ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರಿಂದ ಸಂಸತ್ ನ ಕಲಾಪ ವ್ಯರ್ಥವಾಗುತ್ತಿದ್ದು ಮಹತ್ವದ ಮಸೂದೆಗಳ ಅಂಗೀಕಾರ ಅಥವಾ ಅದರ ಬಗ್ಗೆ ಚರ್ಚೆ ನಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.