ನವದೆಹಲಿ: ವ್ಯಾಪಂ, ಲಲಿತ್ ಮೋದಿಗೆ ನೆರವು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಗದ್ದಲ ಸೋಮವಾರವೂ ತೀವ್ರಗೊಂಡ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 25 ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದ್ದಾರೆ.
ನಿರಂತರವಾಗಿ ಭಿತ್ತಿಪತ್ರ ಹಿಡಿದು ಪ್ರತಿಭಟಿಸಿ, ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ 25 ಕಾಂಗ್ರೆಸ್ ಸಂಸದರ ವಿರುದ್ಧ ಸ್ಪೀಕರ್ ಸುಮಿತ್ರಾ ಮಹಾಜನ್ ಕಠಿಣ ಕ್ರಮ ತೆಗೆದುಕೊಂಡಿದ್ದು, ಅವರನ್ನು 5 ದಿನಗಳ ಕಾಲ ಕಲಾಪದಿಂದ ಅಮಾನತುಗೊಳಿಸಿದ್ದಾರೆ.
ಲಲಿತ್ ಮೋದಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಕಳಂಕಿತ ಎನ್‌ಡಿಎ ನಾಯಕರು ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
ಈ ಸಂಬಂಧ ತಾನು ಚರ್ಚೆ ಸಿದ್ಧ ಎನ್ನುತ್ತಿರುವ ಸರ್ಕಾರ, ಸುಗಮ ಕಲಾಪಕ್ಕಾಗಿ ಇಂದು ಸರ್ವಪಕ್ಷ ಸಭೆ ಕರೆದಿತ್ತು. ಆದರೆ ಆ ಸಭೆಗೂ ಕಾಂಗ್ರೆಸ್ ಗೈರು ಆಗಿದ್ದು, ಲಲಿತ್ ಮೋದಿ ಪ್ರಕರಣವನ್ನು ಮುಂದಿಟ್ಟುಕೊಂಡು, ಸಂಸತ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದರಿಂದಾಗಿ ಅಧಿವೇಶನ ಪ್ರಾರಂಭವಾದಗಿನಿಂದಲೂ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯುಂಟಾಗುತ್ತಿದ್ದು, ಕಲಾಪವನ್ನು ನಿರಂತರವಾಗಿ ಮುಂದೂಡಲಾಗುತ್ತಿದೆ.