ಚೆನ್ನೈ: ಈ ಪುಟ್ಟ ಪೋರನಿಗಿನ್ನೂ ಐದರ ಹರೆಯ. ಈ ವಯಸ್ಸಿನಲ್ಲಿಯೇ ಈತ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾನೆ. ಶಾಲಾ ರಜಾ ದಿನಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಲ್ಲುವ ಈತ ಹೆಲ್ಮೆಟ್ ಧರಿಸದವರಿಗೆ ಅದನ್ನು ಧರಿಸುವಂತೆ ಮನವಿ ಮಾಡುತ್ತಿದ್ದಾನೆ.
ಚೆನ್ನೈನ ಪದ್ಮಾ ಶೇಷಾದ್ರಿ ಶಾಲೆಯಲ್ಲಿ ಯುಕೆಜಿ ಓದುತ್ತಿರುವ 5 ವರ್ಷದ ಬಾಲಕ ಆಕಾಶ್ ಈ ಮಹಾತ್ಕಾರ್ಯವನ್ನು ಮಾಡುತ್ತಿದ್ದು, ಈತನ ಸಾಮಾಜಿಕ ಕಳಕಳಿ ನೋಡಿದ ಚೆನ್ನೈ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮದ ಕುರಿತ ಹಲವು ಅಭಿಯಾನಗಳಲ್ಲಿ ಆಕಾಶ್ ನನ್ನು ತೊಡಗಿಸಿಕೊಂಡಿದ್ದಾರೆ.
ಅಷ್ಟಕ್ಕೂ ಬಾಲಕನಿಗೆ ಈ ಕಾರ್ಯ ಮಾಡಲು ಪ್ರೇರಣೆಯಾಗಿದ್ದು ಒಂದು ಅಪಘಾತ. ಒಂದು ದಿನ ತನ್ನ ತಂದೆ ಆನಂದನ್ ಹಾಗೂ ತಾಯಿ ಯೋಗಲಕ್ಷ್ಮಿ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ವೇಳೆ ಕಣ್ಣ ಮುಂದೆಯೇ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದ. ಆಗ ತಾಯಿ ಯೋಗಲಕ್ಷ್ಮಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಆತ ಸಾವನ್ನಪ್ಪಬೇಕಾಯಿತು ಎಂದು ಹೇಳಿದ ಮಾತು ಬಾಲಕ ಆಕಾಶ್ ತಲೆಯಲ್ಲಿ ಅಚ್ಚಳಿಯದೆ ಉಳಿದಿದೆ.
ಅಂದಿನಿಂದ ತನ್ನ ಸಹಪಾಠಿಗಳಿಗೆ ಅವರ ತಂದೆ- ತಾಯಿಗಳು ವಾಹನ ಸವಾರಿ ಮಾಡುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಹೇಳುವಂತೆ ಪ್ರೇರೇಪಿಸುತ್ತಿದ್ದ ಆಕಾಶ್, ಈಗ ರಜಾ ದಿನಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತು ಹೆಲ್ಮೆಟ್ ಧರಿಸುವಂತೆ ಮನವಿ ಮಾಡುತ್ತಾನಲ್ಲದೇ ಸಂಚಾರಿ ನಿಯಮಗಳ ಕುರಿತ ಕರ ಪತ್ರವನ್ನೂ ವಿತರಿಸುತ್ತಾನೆ. ಈತನ ಸಾಮಾಜಿಕ ಕಾರ್ಯ ಕಂಡು ಆನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.