ಹೊಸದಿಲ್ಲಿ: ಕಾಂಗ್ರೆಸ್ ಸಂಸದರ ಅಮಾನತನ್ನು ವಿರೋಧಿಸಿ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಂಗಳವಾರ ತೀವ್ರಗೊಂಡಿದೆ.
ಪಕ್ಷದ ಸಂಸದರ ಅಮಾನತಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಐದು ದಿನಗಳ ಕಾಲ ಲೋಕಸಭೆ ಕಲಾಪ ಬಹಿಷ್ಕರಿಸಿದೆ. ಪ್ರತಿಪಕ್ಷಗಳ ಸದಸ್ಯರ ಗದ್ದಲದಿಂದ ರಾಜ್ಯಸಭೆ ಕಲಾಪವನ್ನೂ ಮಧ್ಯಾಹ್ನದವರೆಗೆ ಮುಂದೂಡಲಾಗಿದೆ. ಕಾಂಗ್ರೆಸ್ ಪ್ರತಿಭಟನೆಗೆ ಎಸ್ಪಿ, ಎಎಪಿ ಸೇರಿದಂತೆ ಇತರ ಪ್ರತಿಪಕ್ಷಗಳು ಬೆಂಬಲ ನೀಡಿವೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಪ್ರಧಾನಿಗೆ ಅವರ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವ ಅಭ್ಯಾಸ ಇದೆ. ಅದೇ ರೀತಿ ಜನರ ‘ಮನ್ ಕೀ ಬಾತ್’ ಗೂ ಕಿವಿಗೊಡಲು ಅವರು ಪ್ರಯತ್ನಿಸಬೇಕು,’ ಎಂದು ವ್ಯಂಗ್ಯವಾಡಿದ್ದಾರೆ.
‘ಹಗರಣದಲ್ಲಿ ಸಿಲುಕಿರುವ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿಯ ಇಬ್ಬರು ಮುಖ್ಯಮಂತ್ರಿಗಳು ಅಧಿಕಾರದಿಂದ ಕೆಳಗಿಳಿಯುವವರೆಗೂ ಕಾಂಗ್ರೆಸ್ ತನ್ನ ಪ್ರತಿಭಟನೆ ಮುಂದುವರಿಸಲಿದೆ. ಇಂದು ಕಾಂಗ್ರೆಸ್ ಬೇಡಿಕೆ ಅಲ್ಲ, ದೇಶದ ಜನತೆಯ ಆಗ್ರಹ,’ ಎಂದು ರಾಹುಲ್ ಹೇಳಿದ್ದಾರೆ.
‘ಐಎಪ್‌ಎಲ್ ಹಗರಣದ ಆರೋಪಿ ಲಲತ್ ಮೋದಿಗೆ ನೆರವಾಗಲು ಸುಷ್ಮಾ ಸ್ವರಾಜ್ ಕಾನೂನು ಉಲ್ಲಂಘಿಸಿರುವುದು ಸಷ್ಟವಾಗಿದೆ,’ ಎನ್ನುವ ಮೂಲಕ ವಿದೇಶ ಸಚಿವೆಯ ರಾಜೀನಾಮೆಗೆ ರಾಹುಲ್ ಆಗ್ರಹಿಸಿದ್ದಾರೆ.
ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ:
ಸಂಸತ್ತಿನ ಉಭಯ ಸದನಗಳ ಸದಸ್ಯರು ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ‘ಸಂಸದೀಯ ಪ್ರಜಾತಂತ್ರದ ಕೊಲೆ ಆಗಿದೆ,’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ. ಅಪರೂಪವಾಗಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಐದು ದಿನ ಅಮಾನತು:
ಬಿಜೆಪಿ ಸರಕಾರಗಳ ಹಗರಣಗಳ ವಿರುದ್ಧ ಸತತ ಕೋಲಾಹಲ ಎಬ್ಬಿಸಿ ಕಲಾಪಕ್ಕೆ ಭಂಗ ಉಂಟು ಮಾಡಿದರೆಂದು ಕಾಂಗ್ರೆಸ್ಸಿನ 25 ಮಂದಿ ಲೋಕಸಭಾ ಸದಸ್ಯರು ಸೋಮವಾರ 5 ದಿನಗಳ ಅಮಾನತಿನ ಶಿಕ್ಷೆಗೆ ಗುರಿಯಾದರು. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಸಂಸದರ ಮೊದಲ ಅಮಾನತು ಇದಾಗಿದೆ. ಪ್ರತಿಪಕ್ಷಗಳ ಸದಸ್ಯರು ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ಕಳೆದ ತಿಂಗಳು ಮಳೆಗಾಲದ ಅಧಿವೇಶನ ಆರಂಭ ಆದಾಗಿನಿಂದಲೂ ಲಲಿತ್ ಮೋದಿ ಮತ್ತು ವ್ಯಾಪಂ ಹಗರಣಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮವಾಗಿ ಸದನದ ಕಲಾಪ ಬಹುಪಾಲು ನಡೆದಿಲ್ಲ.