ಖ್ಯಾತ ಹಾಸ್ಯ ನಟ ಚಿಕ್ಕಣ್ಣನ ಹೆಸರಿನಲ್ಲಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದಿದ್ದವನೊಬ್ಬ ಬಹಳಷ್ಟು ಮಂದಿ ಯುವತಿಯರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿರುವ 22 ವರ್ಷದ ಪ್ರಜ್ವಲ್ ಎಂಬಾತ ತನ್ನ ಮೋಜು ಮಸ್ತಿಗಾಗಿ, ನಟ ಚಿಕ್ಕಣ್ಣನವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದು, ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಫೇಸ್ ಬುಕ್ ನಲ್ಲಿ ಚಿಕ್ಕಣ್ಣನವರ ಹೆಸರಿನಲ್ಲಿ ಪ್ರಜ್ವಲ್ ತೆರೆದಿದ್ದ ಅಕೌಂಟನ್ನು ಚಿಕ್ಕಣ್ಣನವರದೇ ಎಂದು ಭಾವಿಸುತ್ತಿದ್ದ ಆನೇಕ ಯುವತಿಯರು ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೇಳಿದ್ದು, ಅದನ್ನು ಬಳಸಿಕೊಂಡ ಪ್ರಜ್ವಲ್, ಆ ಯುವತಿಯರಿಗೆ ನಿರ್ಮಾಪಕರ ಬಳಿ ಮಾತನಾಡಿರುವುದಾಗಿ ಹೇಳಿ ಅವರನ್ನು ಭೇಟಿ ಮಾಡುವಂತೆ ತಿಳಿಸುತ್ತಿದ್ದನೆನ್ನಲಾಗಿದೆ.
ಬಳಿಕ ಆ ಯುವತಿಯರ ಮುಂದೆ ನಿರ್ಮಾಪಕನಂತೆ ನಟಿಸುತ್ತಿದ್ದ ಪ್ರಜ್ವಲ್, ಮಾಲ್ ಬಳಿ ಭೇಟಿ ಮಾಡಲು ಕರೆದು ಅವರ ಮುಂದೆ ಯಾರಿಗೂ ಮೊಬೈಲ್ ನಲ್ಲಿ ಕರೆ ಮಾಡಿದಂತೆ ಮಾಡುತ್ತಿದ್ದು, ಫೋನ್ ಸರಿಯಾಗಿ ಕೇಳಿಸುತ್ತಿಲ್ಲವೆಂದು ಹೇಳಿ ಯುವತಿಯರ ಬಳಿ ಇರುತ್ತಿದ್ದ ಮೊಬೈಲ್ ಪಡೆದು ಮಾಯವಾಗುತ್ತಿದ್ದನೆನ್ನಲಾಗಿದೆ.
ಅಲ್ಲದೇ ಆ ಮೊಬೈಲ್ ನಲ್ಲಿ ಇರುತ್ತಿದ್ದ ಯುವತಿಯರ ಮಾಡೆಲಿಂಗ್ ಚಿತ್ರವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಾ ಹಣಕ್ಕೂ ಡಿಮ್ಯಾಂಡ್ ಮಾಡುತ್ತಿದ್ದನೆಂದು ಹೇಳಲಾಗಿದೆ. ಇದೀಗ ಪ್ರಜ್ವಲ್ ನನ್ನು ವಶಕ್ಕೆ ಪಡೆದಿರುವ ಜೆ.ಪಿ. ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.