ಕೇಂದ್ರ ಸರ್ಕಾರದ ಆದೇಶದಂತೆ ಸುಮಾರು 857 ಅಶ್ಲೀಲ ವೆಬ್ ಸೈಟ್ ಗಳನ್ನು ಇಂಟರ್ನೆಟ್ ಸೇವೆ ನೀಡುವ ಬಿ.ಎಸ್.ಎನ್.ಎಲ್., ವೋಡಾ ಫೋನ್, ಎಂ.ಟಿ.ಎನ್.ಎಲ್. ಮೊದಲಾದ ಸಂಸ್ಥೆಗಳು ಬ್ಯಾನ್ ಮಾಡಿದ್ದು, ಇವುಗಳಲ್ಲಿ ಕೆಲವು ಅಶ್ಲೀಲ ವೆಬ್ ಸೈಟ್ ಗಳಲ್ಲವೆಂದು ಹೇಳಲಾಗಿದೆ.
ಈ 857 ಅಶ್ಲೀಲ ವೆಬ್ ಸೈಟ್ ಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಸುಮಾರು 5 ವೆಬ್ ಸೈಟ್ ಗಳು ಮನರಂಜನೆ ಒದಗಿಸುವ ತಾಣಗಳೆಂದು ಹೇಳಲಾಗಿದ್ದು, ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಾರೀ ಜನಪ್ರಿಯತೆ ಪಡೆದಿವೆ. ಇವುಗಳ ಪೈಕಿ ಒಂದಾದ CollegeHumor.com ಕಾಲೇಜು ವಿದ್ಯಾರ್ಥಿಗಳ ತಮಾಷೆಯ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದು, ಯೂ ಟ್ಯೂಬಿನಲ್ಲೂ ಸ್ಥಾನ ಪಡೆದಿದೆ.
ಅಮೆರಿಕಾದಲ್ಲಿ ಜನಪ್ರಿಯ 1000 ವೆಬ್ ಸೈಟ್ ಗಳ ಪಟ್ಟಿಯಲ್ಲಿ ಇದೂ ಒಂದಾಗಿದ್ದು, ಈ ವೆಬ್ ಸೈಟ್ ನಲ್ಲಿ ಅಶ್ಲೀಲ ದೃಶ್ಯಾವಳಿಗಳನ್ನು ಪ್ರಸಾರ ಮಾಡದಿದ್ದರೂ ನಿಷೇಧಕ್ಕೊಳಗಾಗಿರುವುದು ಅಚ್ಚರಿಗೀಡು ಮಾಡಿದೆ. ಹಾಗೆಯೇ 9Gag.com ಕೂಡಾ ನಿಷೇಧಕ್ಕೊಳಲ್ಪಟ್ಟಿರುವ ವೆಬ್ ಸೈಟ್ ಗಳ ಪೈಕಿ ಒಂದಾಗಿದ್ದು ಇದೂ ಕೂಡಾ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುತ್ತಿರಲಿಲ್ಲವೆನ್ನಲಾಗಿದೆ. ಈ ರೀತಿ ಐದಕ್ಕೂ ಹೆಚ್ಚು ಅಶ್ಲೀಲ ವೆಬ್ ಸೈಟ್ ಅಲ್ಲದವುಗಳನ್ನೂ ಈಗ ಬ್ಯಾನ್ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ.