ಜಮ್ಮು: ಲಷ್ಕರೆ ತಯ್ಬಾದಲ್ಲಿ ಉಗ್ರ ಸಂಘಟನೆಯಲ್ಲಿ ತರಬೇತಿ ಪಡೆದು, 90 ದಿನಗಳ ಹಿಂದೆಯೇ ಭಾರತ ಪ್ರವೇಶಿಸಿದ್ದಾಗಿ ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಭದ್ರತಾ ಪಡೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ ಬುಧವಾರ ಜೀವಂತ ಸೆರೆ ಸಿಕ್ಕ ಮೊಹಮ್ಮದ್ ನವೀದ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಮುಂಬಯಿ ದಾಳಿಕೋರ ಅಜ್ಮಲ್ ಕಸಬ್ ನಂತರ ಜೀವಂತ ಸೆರೆ ಸಿಕ್ಕಿರುವ ಪಾಕಿಸ್ತಾನ ಮೂಲದ ನವೀದ್(22)ನನ್ನು ಬುಧವಾರ ರಾತ್ರಿಯಿಡೀ ವಿಚಾರಣೆಗೆ ಒಳಪಡಿಸಲಾಗಿದ್ದು, ರಮ್ಜಾನ್ ಸಂದರ್ಭದಲ್ಲಿ ಕಾಶ್ಮೀರ ಕಣಿವೆ ಮೂಲಕ ಇತರ ಉಗ್ರರ ಜತೆಗೆ ಭಾರತ ಪ್ರವೇಶಿಸಿದ್ದಾಗಿ ತಿಳಿಸಿದ್ದಾನೆ.
ಪಾಕಿಸ್ತಾನದ ಫೈಸ್ಲಾಬಾದ್ ಮೂಲದವನೆಂದು ಹೇಳಿಕೊಂಡಿರುವ ನವೀದ್ ಒಂದು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಅಡಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ಮೂಲಕ ಉಧಂಪುರ ತಲುಪಿದ್ದ ನವೀದ್ ಹಾಗೂ ಆತನ ಸಹಚರನಿಗೆ ಬನಿಹಾಲ್ ಕಾಲುವೆ ಸಮೀಪದಲ್ಲಿ ಸೇನಾ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ನಿರ್ದೇಶನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಅಮರನಾಥ ಯಾತ್ರಿಗಳು ಇದೇ ಹೆದ್ದಾರಿ ಮೂಲಕ ಹಾದು ಹೋದರೂ, ಉಗ್ರರು ಯಾತ್ರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ನವೀದ್ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಜಮ್ಮುವಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಗುರುವಾರ ಅತನ ವಿಚಾರಣೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಸಹ ಹಾಜರಿರುವರು ಎಂದು ಮೂಲಗಳು ತಿಳಿಸಿವೆ.