ನವದೆಹಲಿ: ಇದುವರೆಗೂ ಪಾಕಿಸ್ತಾನದ ಸಾಮಾಜಿಕ ಕಲ್ಯಾಣ ಸಂಘಟನೆಯೊಂದರ ಆಶ್ರಯದಲ್ಲಿದ್ದ ಗೀತಾ ತಮ್ಮ ಪುತ್ರಿ ಎಂದು ಅಮೃತಸರದ ಕಿವುಡ ಮತ್ತು ಮೂಗ ದಂಪತಿ ಹೇಳಿಕೊಂಡಿದ್ದಾರೆ. ಆಕೆಯ ಹೆಸರು ಪೂಜಾ ಆಗಿದ್ದು, 4 ವರ್ಷದವಳಾಗಿದ್ದಾಗ ಅಮೃತಸರದ ರೈಲ್ವೆ ನಿಲ್ದಾಣದಿಂದ ಕಾಣೆಯಾಗಿದ್ದಳೆಂದು ರಾಜೇಶ್ಕುಮಾರ್ ಮತ್ತು ರಾಮ್ದುಲ್ಹಾರಿ ದಂಪತಿ ತಿಳಿಸಿದ್ದಾರೆ.
ತಾವು ಬಿಹಾರ ಮೂಲದವರಾಗಿದ್ದು, ಹಲವು ದಶಕಗಳ ಹಿಂದೆ ಅಮೃತಸರಕ್ಕೆ ವಲಸೆ ಬಂದಿದ್ದೇವೆ. ಅಮೃತಸರದ ರೈಲ್ವೆ ನಿಲ್ದಾಣದ ಸುತ್ತಮುತ್ತ ಭಿಕ್ಷೆ ಬೇಡಿಕೊಂಡು, ಚಿಂದಿ ಆಯ್ದುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದುದಾಗಿ ರಾಜೇಶ್ಕುಮಾರ್ ಅವರ 14 ವರ್ಷದ ಪುತ್ರ ರಾಜು ತಿಳಿಸಿದ್ದಾನೆ.
ಆಶ್ಚರ್ಯದ ಸಂಗತಿ ಎಂದರೆ ಗೀತಾ ನೋಡಲು ರಾಮ್ದುಲ್ಹಾರಿಯ ಸಾಕಷ್ಟು ಹೋಲಿಕೆಗಳನ್ನು ಹೊಂದಿದ್ದಾಳೆ. ಆದರೂ ಕೂಡ ಇವರು ತನ್ನ ಪಾಲಕರೆಂದು ಒಪ್ಪಿಕೊಳ್ಳಲು ಗೀತಾ ನಿರಾಕರಿಸಿದ್ದಾಳೆ. ತನ್ನ ತಾಯಿ ಸೀರೆ ಉಡುತ್ತಿದ್ದರು. ಪಂಜಾಬಿ ಸಲ್ವಾರ್ ಕಮೀಜ್ ಅನ್ನು ತೊಡುತ್ತಿರಲಿಲ್ಲವೆಂದು ಆಕೆ ಪ್ರತಿಪಾದಿಸಿದ್ದಾಳೆ.
ಈ ವಿಷಯ ತಿಳಿದ ಪಾಕಿಸ್ತಾನದ ಮಾನವ ಹಕ್ಕು ಕಾರ್ಯಕರ್ತ ಅನ್ಸಾರ್ ಬುರ್ನಿ, ಗೀತಾ ಹಾಗೂ ರಾಮ್ದುಲ್ಹಾರಿ ದಂಪತಿಯ ಡಿಎನ್ಎ ಪರೀಕ್ಷೆ ನಡೆಸುವಂತೆ ಸಲಹೆ ಕೊಟ್ಟಿರುವುದಾಗಿ ವರದಿಗಳು ತಿಳಿಸಿವೆ. ಸದ್ಯ ಲಂಡನ್ನಲ್ಲಿರುವ ಅವರು, ಗೀತಾಳನ್ನು ಭಾರತಕ್ಕೆ ಕರೆತಂದು, ಈ ಪರೀಕ್ಷೆಗೆ ಒಳಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದಾರೆ.