ನವದೆಹಲಿ: ಪ್ರತಿ ವರ್ಷ ಸರಾರಸರಿ ೫ ಲಕ್ಷ ಅಪಘಾತಗಳಾಗುತ್ತವೆ ಮತ್ತು ಇವುಗಳಲ್ಲಿ ಸುಮಾರು ೧.೫ಲಕ್ಷ ಜನ ಸಾವನಪ್ಪುತ್ತಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ಈ ಅಪಘಾತಗಳಲ್ಲಿ ಶೇಕಡಾ ೭೮% ‘ಚಾಲಕರ ತಪ್ಪು’ ಕಾರಣ ಮತ್ತು ಚಾಲಕರಿಗೆ ಇನ್ನು ಸರಿಯಾದ ತರಬೇತಿಯ ಅವಶ್ಯಕತೆ ಇದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಸಚಿವ ಪೋನ್ ರಾಧಾಕೃಷ್ಣ ತಿಳಿಸಿದ್ದಾರೆ.
ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರತಿವರ್ಷ ಸರಾಸರಿ ೫ ಲಕ್ಷ ಅಪಘಾತಗಳಾಗುತ್ತವೆ ಅವುಗಳಲ್ಲಿ ಸುಮಾರು ೧.೫ ಲಕ್ಷ ಜನ ಸಾವನ್ನಪ್ಪುತ್ತಾರೆ ಹಾಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಗಾಯಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಅಪಘಾತಗಳಿಂದ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರಿಕೆಯ ಕೂಗು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಚಾಲಕರಿಗೆ ತರಬೇತಿ ನೀಡಲು ಸಂಸ್ಥೆಗಳನ್ನು ಸ್ಥಾಪಿಸುವ ಯಾವುದೇ ಯೋಜನೆಗಳಿದೆಯೇ ಎಂಬ ಪ್ರಶ್ನಗೆ, ರಾಧಾಕೃಷ್ಣನ್ ಅವರು ಚಾಲಕ ಪರವಾನಗಿ ನೀಡುವುದು ರಾಜ್ಯಸರ್ಕಾರ ಆದುದರಿಂದ ಇದರಲ್ಲಿ ಕೇಂದ್ರದ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ. ಈ ಉತ್ತರ ಅನೇಕ ಸಂಸದರಲ್ಲಿ ಆಕ್ರೋಶ ಮೂಡಿಸಿ, ಕೇಂದ್ರ ಸರ್ಕಾರದ ಈ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ ಎಂದಿದ್ದಾರೆ.
ಇದರ ಮಧ್ಯೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಟ್ಟಿಗೆ ಕೆಲಸ ಮಾಡುವ ಅಗತ್ಯವಿದೆ ಎಂದಿದ್ದಾರೆ.