ಮುಂಬಯಿ: 1993ರ ಮುಂಬಯಿ ಸರಣಿ ಸ್ಫೋಟದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಯಾಕುಬ್ ಖಾನ್ ಅಲಿಯಾಸ್ ಯೇಡಾ ಯಾಕುಬ್ ಪಾಕಿಸ್ತಾನದ ಕರಾಚಿಯಲ್ಲಿ ಮೃತನಾಗಿದ್ದಾನೆ ಎನ್ನಲಾಗಿದೆ.
ಮಾಹಿತಿದಾರರಿಂದ ಮುಂಬಯಿ ಪೊಲೀಸರು ಬುಧವಾರ ಪಡೆದಿರುವ ಮಾಹಿತಿ ಪ್ರಕಾರ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮುಂಬಯಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ತಿಳಿಸಿದ್ದಾರೆ.
ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ 257 ಜನ ಬಲಿಯಾಗಿದ್ದರು. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಸರಣಿ ಸ್ಫೋಟದ ಸಂಚಿನಲ್ಲಿ ಯೇಡಾ ಯಾಕುಬ್ ಹಾಗೂ ಆತನ ಸೋದರ ಮಜೀದ್ ಖಾನ್ ಪ್ರಮುಖ ಪಾತ್ರ ವಹಿಸಿದ್ದರು. ಸ್ಫೋಟಕ್ಕೆ ಬಳಸಿದ ಆರ್‌ಡಿಎಕ್ಸ್ ಅನ್ನು ರಾಯಗಢದಿಂದ ಮುಂಬಯಿಗೆ ತರುವ ಕಾರ್ಯದಲ್ಲಿ ಅವರಿಬ್ಬರೂ ಕೈಜೋಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಮ್ಮ ಕೆಲಸ ನಿರ್ವಹಿಸಿದ ಬೆನ್ನಿಗೇ ಯೇಡಾ ದುಬೈಗೆ ಹಾರಿದ್ದು, ಅಲ್ಲಿಂದ ಕರಾಚಿಗೆ ತೆರಳಿ ತಲೆಮರೆಸಿಕೊಂಡಿದ್ದ. ಆತನ ಎಲ್ಲ ಕೃತ್ಯಗಳಿಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಹಾಯ ಮಾಡಿತ್ತು ಎಂದು ಸರಣಿ ಸ್ಫೋಟದ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು.
ಆದರೆ ಮಜೀದ್ ಮಾತ್ರ ಮಂಬಯಿಯಲ್ಲೇ ಉಳಿದುಕೊಂಡು ಕಟ್ಟಡ ನಿರ್ಮಾಣ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ. ಆದರೆ ಆತನನ್ನು ವಿರೋಧಿ ಚೋಟಾ ರಾಜನ್ ಗ್ಯಾಂಗ್‌ನ ಸದಸ್ಯರು 2000ದಲ್ಲಿ ಮುಂಬಯಿ ಉಪನಗರ ಬಾಂದ್ರಾದಲ್ಲಿ ಗುಂಡಿಕ್ಕೆ ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕರಾಚಿಗೆ ತೆರಳಿದ ಬಳಿಕ ಆತ ತನ್ನ ಎರಡನೇ ಪತ್ನಿ ಹಾಗೂ ಮಕ್ಕಳೊಂದಿಗೆ ನೆಲೆಸಿದ್ದ. ಭೂಗತ ಪಾತಕಿ ದಾವುದ್ ಇಬ್ರಾಹಿಂ ಗ್ಯಾಂಗ್‌ಗೆ ಮುಂಬಯಿ ಹಾಗೂ ಉತ್ತರಪ್ರದೇಶದಲ್ಲಿ ಸದಸ್ಯರನ್ನು ನೇಮಕ ಮಾಡುವ ಜಾಲವನ್ನು ನಿಯಂತ್ರಿಸುತ್ತಿದ್ದ. ಅಲ್ಲದೆ ದಾವುದ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕ ದ್ರವ್ಯ ಜಾಲದ ರೂವಾರಿಯಾಗಿದ್ದು, 2013ರಲ್ಲಿ ಮೃತನಾದ ಇಕ್ಬಾಲ್ ಮಿರ್ಚಿಯ ಹಣಕಾಸು ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೋನ್ ಪ್ರದಾನ ಸಂಚುಕೋರರಾಗಿದ್ದು, ಅವರಿನ್ನೂ ಪಾಕಿಸ್ತಾನದಲ್ಲೇ ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.