ಹೊಸದಿಲ್ಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೇಲೆ ಶುಕ್ರವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಟಕ ಆಡೋದ್ರಲ್ಲಿ ಸುಷ್ಮಾ ಪರಿಣತೆ ಎಂದು ಲೇವಡಿ ಮಾಡಿದ್ಧಾರೆ.
ಲೋಕಸಭೆಯಲ್ಲಿ ಗುರುವಾರ ಭಾವನಾತ್ಮಕವಾಗಿ ಮಾತನಾಡಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಸುಷ್ಮಾ ಸ್ವರಾಜ್, ತಾವು ತಪ್ಪು ಮಾಡಿಲ್ಲ. ಲಲಿತ್ ಮೋದಿಗೆ ಸಹಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಾವು ಸಹಾಯ ಮಾಡಿದ್ದು ಲಲಿತ್ ಮೋದಿಗಲ್ಲ, ಅವರ ಕ್ಯಾನ್ಸರ್ ಪೀಡಿತ ಪತ್ನಿಗೆ ಎಂದು ಹೇಳಿದ್ದರಲ್ಲದೆ, ತಮ್ಮ ಜಾಗದಲ್ಲಿ ಸೋನಿಯಾಗಾಂಧಿ ಇದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿ ಕಾಂಗ್ರೆಸ್ ಹೋರಾಟಕ್ಕೆ ತಿರುಗೇಟು ನೀಡಿದ್ದರು.
ಸುಷ್ಮಾ ಹೇಳಿಕೆಯನ್ನು ಆಧರಿಸಿ ತಮ್ಮನ್ನು ಪ್ರಶ್ನಿಸಿದ ಸುದ್ದಿಗಾರರ ಜತೆ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಾಟಕ ಆಡೋದರಲ್ಲಿ ಅವರು ಎತ್ತಿದ ಕೈ. ಸಂಕಷ್ಟದಲ್ಲಿರುವ ಮಹಿಳೆಗೆ ನಾನೂ ಕೂಡ ಸಹಾಯ ಮಾಡುತ್ತಿದ್ದೆ. ಆಧರೆ ಅವರ ಥರ ಕಾನೂನು ಮುರಿದು ಅಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಅಮಾನತು ಮಾಡಿದ ಕ್ರಮ ವಿರೋಧಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮುಂದುವರಿಸಿದ್ದಾರೆ.