ಹೊಸದಿಲ್ಲಿ/ಜಮ್ಮು: ಜಮ್ಮು-ಕಾಶ್ಮೀರ ಕಣಿವೆಯ ಉಧಂಪುರ ಜಿಲ್ಲೆಯ ಸಿಮ್ರೋಲಿ ಬಳಿ ಬುಧವಾರ ನಡೆದ ದಾಳಿ ವೇಳೆ ಜೀವಂತವಾಗಿ ಸೆರೆ ಸಿಕ್ಕ ಲಷ್ಕರೆ ಉಗ್ರ ಮೊಹಮ್ಮದ್ ನವೀದ್ ಯಾಕೂಬ್ ಅಲಿಯಾಸ್ ಉಸ್ಮಾನ್ ಪಾಕಿಸ್ತಾನದವನು ಎಂಬ ಭಾರತದ ವಾದ ದೃಢಪಟ್ಟಿದೆ. ಉಸ್ಮಾನ್ ತನ್ನ ದೇಶದ ಪ್ರಜೆಯೇ ಅಲ್ಲ ಎಂದು ಪಾಕಿಸ್ತಾನ ನಿರಾಕರಿಸಿದ ಬೆನ್ನಿಗೇ ಆತನ ತಂದೆಯನ್ನು ಸಂಪರ್ಕಿಸಿದ ಆಂಗ್ಲ ಪತ್ರಿಕೆಯೊಂದು ‘ಕಹಿಸತ್ಯ’ವನ್ನು ಹೊರಹಾಕಿದೆ. ತನಿಖಾಧಿಕಾರಿಗಳು ಹೊರಗೆಡವಿದ ಮಾಹಿತಿ ಮೇರೆಗೆ ಪತ್ರಿಕೆಯೊಂದು, ಪಾಕ್‌ನ ಪ್ರಜೆ ಮೊಹಮ್ಮದ್ ಯಾಕೂಬ್ ಗೆ ಕರೆ ಮಾಡಿದಾಗ, ಅವರು ಉಗ್ರ ಉಸ್ಮಾನ್ ತಮ್ಮ ಮಗನೆಂದು ಒಪ್ಪಿಕೊಂಡಿದ್ದಾರೆ. ಇವರು ಫೈಸಲಾಬಾದ್‌ನಲ್ಲಿರುವ ಗುಲಾಮ್ ಮೊಹಮ್ಮದಾಬಾದ್ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ.
”ಉಸ್ಮಾನ್ ನನ್ನ ಮಗ ನಿಜ. ಅದರಲ್ಲಿ ಅನುಮಾನವೇ ಬೇಡ. ಯಾವುದೋ ಪರಿಸ್ಥಿತಿಗೆ ಒಳಪಟ್ಟು ಅವನು ಮಹಾಪರಾಧ ಮಾಡಿದ್ದಾನೆ. ಲಷ್ಕರೆ ಉಗ್ರರು ಆತ ದಾಳಿ ವೇಳೆ ಮೃತಪಡುತ್ತಾನೆಂದೇ ನಿರೀಕ್ಷಿಸಿದ್ದರು. ಬಹುಶಃ ಅವರಿಗೂ ಇದೇ ಬೇಕಾಗಿತ್ತು. ಆದರೆ ಅವನೀಗ ಸೆರೆ ಸಿಕ್ಕಿದ್ದಾನೆ. ಇಲ್ಲಿ ಲಷ್ಕರೆ ಉಗ್ರರು ಇಂದಲ್ಲಾ ನಾಳೆ ನಮ್ಮನ್ನು ಕೊಲ್ಲುವುದು ಗ್ಯಾರಂಟಿ. ದಯವಿಟ್ಟು ನನ್ನ ಮಗನ ತಪ್ಪನ್ನು ಮನ್ನಿಸಿಬಿಡಿ. ಅವನನ್ನು ಗಲ್ಲಿಗೆ ಹಾಕಬೇಡಿ. ನಾನೊಬ್ಬ ನತದೃಷ್ಟ ತಂದೆ,” ಎಂದು ಮೊಹಮ್ಮದ್ ಯಾಕುಬ್ ಅಸಹಾಯಕತೆ ಹೊರಹಾಕಿದ್ದಾರೆ. ಸುಮಾರು ಒಂದು ನಿಮಿಷ 20 ಸೆಕೆಂಡುಗಳಷ್ಟೇ ದೂರವಾಣಿಯಲ್ಲಿ ಅವರು ತಮ್ಮ ನೋವನ್ನು ತೋಡಿಕೊಂಡರು. ಬಳಿಕಎಷ್ಟೇ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್ ಆಗಿದೆ.
ಪಾಕ್ ಅದೇ ರಾಗ: ಈ ಬೆಳವಣಿಗೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಕುತಂತ್ರವನ್ನು ಬಯಲು ಮಾಡಲು ಸಾಕಷ್ಟು ಪುರಾವೆ ಒದಗಿಸಿದೆಯಾದರೂ ಪಾಕ್ ಸರಕಾರ ಮಾತ್ರ ಉಗ್ರ ಉಸ್ಮಾನ್ ತನ್ನ ಪ್ರಜೆಯೇ ಅಲ್ಲ ಎಂದು ಅದೇ ರಾಗ ಹಾಡಿದೆ. ಈ ಮೂಲಕ ತನ್ನ ಹಳೆ ಚಾಳಿಯನ್ನೇ ಪುನರಾವರ್ತಿಸಿದೆ. ಉಸ್ಮಾನ್ ನಮ್ಮ ದೇಶದ ಪ್ರಜೆ ಅಲ್ಲ ಎಂದು ಅಲ್ಲಿನ ನ್ಯಾಷನಲ್ ಡಾಟಾಬೇಸ್ ಅಂಡ್ ರಿಜಿಸ್ಟ್ರೇಷನ್ ಅಥಾರಿಟಿ ಸ್ಪಷ್ಟಪಡಿಸಿದ್ದಲ್ಲದೇ, ತಾಕತ್ತಿದ್ದರೆ ಭಾರತ ಈ ಸಂಬಂಧ ಪುರಾವೆಯನ್ನು ಒದಗಿಸಲಿ ಎಂದು ಅದು ಸವಾಲು ಹಾಕಿದೆ.
ಈ ಮಧ್ಯೆ ಉಗ್ರನ ಬಂಧನ ಸಂಬಂಧ ಭಾರತದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದಿರುವ ಪಾಕ್ ವಿದೇಶಾಂಗ ಸಚಿವಾಲಯ, ”ತನ್ನ ದೇಶದ ಘನತೆಯನ್ನು ಜಾಗತಿಕ ವೇದಿಕೆಯಲ್ಲಿ ಕೆಡಿಸುವ ಹುನ್ನಾರವಾಗಿ ಭಾರತದ ಭದ್ರತಾ ಪಡೆಗಳು ಈ ನಾಟಕ ಆಡುತ್ತಿವೆ,” ಎಂದು ದೂರಿದೆ. ಕೆಲವೇ ದಿನಗಳಲ್ಲಿ ನಡೆಯಬೇಕಿರುವ ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆಯ ಹಾದಿ ತಪ್ಪಿಸುವ ಕುತಂತ್ರವೂ ಇದರ ಹಿಂದಿರಬಹುದು ಎಂದು ಅದು ಹೇಳಿದೆ.
ಸಂಸತ್ತಿನಲ್ಲಿ ರಾಜನಾಥ್ ವಿವರಣೆ: ಇತ್ತ ಉಧಂಪುರ ದಾಳಿ ಪ್ರಕರಣ ಕುರಿತು ಸಂಸತ್ತಿನ ಉಭಯ ಸದನಗಳಿಗೆ ವಿವರಣೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ”ಜಮ್ಮು-ಶ್ರೀನಗರ ಹೆದ್ದಾರಿಯ ನಾರ್ಸು ನಲ್ಲಾ ಎಂಬ ಪ್ರದೇಶದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ ಉಗ್ರರಿಬ್ಬರು ಪಾಕಿಸ್ತಾನದವರು. ಹಳ್ಳಿಗರಿಂದ ಸೆರೆ ಸಿಕ್ಕ ಲಷ್ಕರೆ ಉಗ್ರ ಮೊಹಮ್ಮದ್ ನವೀದ್ ಯಾಕೂಬ್ ಅಲಿಯಾಸ್ ಉಸ್ಮಾನ್ ಫೈಸಲಾಬಾದ್‌ನವನಾಗಿದ್ದರೆ, ಯೋಧರ ಪ್ರತಿದಾಳಿಯಲ್ಲಿ ಸತ್ತ ಮತ್ತೊಬ್ಬ ಉಗ್ರ ಮೊಹಮ್ಮದ್ ನೂಮೆನ್ ಅಲಿಯಾನ್ ನೋಮಿನ್ ಭವಲ್ಪುರದವನು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಚೆನ್ನಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ,” ಎಂದು ಮಾಹಿತಿ ಕೊಟ್ಟರು. ಹುತಾತ್ಮರಾದ ಇಬ್ಬರು ಬಿಎಸ್‌ಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಚಿವರು, ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಪಾಕ್ ಉಗ್ರರನ್ನು ಪ್ರಚೋದಿಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದ್ದು, ಭಾರತ ಈ ಘಟನೆಯನ್ನು ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಎನ್‌ಐಎ ವಶಕ್ಕೆ ಉಸ್ಮಾನ್ ಉಗ್ರ ಉಸ್ಮಾನ್‌ನನ್ನು ಗುರುವಾರ ವಶಕ್ಕೆ ಪಡೆದಿರುವ ರಾಷ್ಟ್ರೀಯ ತನಿಖಾ ದಳವು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ಹೇಳಿವೆ. ಐಜಿ ಸಂಜೀವ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಎನ್‌ಐಎ ನಡೆಸಿದ ವಿಚಾರಣೆ ವೇಳೆ ಉಸ್ಮಾನ್ ಮತ್ತು ಆತನ ಸಹಚರ ನೋಮಿನ್ ಕಳೆದ ಮೂರು ತಿಂಗಳ ಹಿಂದೆಯೇ ಕಾಶ್ಮೀರಕ್ಕೆ ನುಸುಳಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಗಳಿಗೆಗೊಂದು ಮಾತನಾಡುವ ಆತ ವಿಚಾರಣೆ ವೇಳೆ ತಾನು ಲಷ್ಕರೆ ತಯ್ಬಾ ಸಂಘಟನೆಯ ‘ದೌರ್-ಎ-ಆಲಂ’ ಮತ್ತು ‘ದೌರಾ-ಎ-ಖಾಸ್’ ಎಂಬ ಗುಂಪುಗಳು ನಡೆಸುತ್ತಿದ್ದ ಶಿಬಿರದಲ್ಲಿ ತರಬೇತಿ ಪಡೆದಿದ್ದಾಗಿ ಹೇಳಿದ್ದಾನೆ. ಉಸ್ಮಾನ್ ಮತ್ತು ನೋಮಿನ್ ಭಾರತದ ಗಡಿ ನುಸುಳಿದ ನಂತರ, ಟ್ರಕ್ ಮೂಲಕ ಉಧಂಪುರಕ್ಕೆ ಬಂದಿದ್ದರು ಎಂದು ಗೊತ್ತಾಗಿದೆ.
ಯೋಧರೇ ಇವರ ಟಾರ್ಗೆಟ್ ಆಗಿದ್ದರು… ಬುಧವಾರ ನಡೆದ ಉಧಂಪುರ ಸಮೀದ ಜಮ್ಮು-ಶ್ರೀನಗರ ಹೆದ್ದಾರಿ ಸೇನಾ ವಾಹನಗಳ ಚಲನವಲನಕ್ಕೆ ಸುರಕ್ಷಿತ ದಾರಿಯಾಗಿದೆ. ಕಳೆದ 15 ವರ್ಷಗಳಿಂದ ಈ ಮಾರ್ಗದಲ್ಲಿ ಒಂದೇ ಒಂದು ಉಗ್ರ ದಾಳಿಯೂ ನಡೆದಿರಲಿಲ್ಲ. ಇದೆಲ್ಲ ಮಾಹಿತಿಯನ್ನೂ ಕಲೆಹಾಕಿದ್ದ ಲಷ್ಕರೆ ತಯ್ಬಾ ಸಂಘಟನೆಯು ಈ ಮಾರ್ಗದಲ್ಲಿ ಸಂಚರಿಸುವ ಸೇನಾ ವಾಹನಗಳ ಮೇಲೆ ದಾಳಿ ನಡೆಸುವಂತೆ ಉಗ್ರರಿಗೆ ನಿರ್ದೇಶನ ನೀಡಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಸೇನಾ ವಾಹನಗಳು ಮಾಮೂಲಿ ಬಸ್‌ನಂತೆಯೇ ಇದ್ದ ಕಾರಣ ನವೀದ್ ಉಸ್ಮಾನ್ ಹಾಗೂ ನ್ಯೂಮನ್ ನೋಮಿನ್ ತಮ್ಮ ಗುರಿಯಲ್ಲಿ ಎಡವಿದ್ದರು. ಬಿಎಸ್‌ಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ದಾಳಿ ನಡೆಸುವ ಮುನ್ನ ಇದೇ ಮಾರ್ಗದಲ್ಲಿ ಸಿಆರ್‌ಪಿಎಫ್‌ನ ಬೆಂಗಾವಲು ಪಡೆ ಹಾಗೂ ಕೆಲ ಸೇನಾ ವಾಹನಗಳು ಹಾದು ಹೋಗಿದ್ದರೂ ಅವರು ಗುಂಡಿನ ದಾಳಿ ನಡೆಸಲಿಲ್ಲ. ಸಿಆರ್‌ಪಿಎಫ್ ವಾಹನ ನೀಲಿ ಹೊಂದಿದ್ದರಿಂದ ಅದು ಉಗ್ರರಿಗೆ ದಾರಿ ತಪ್ಪಿಸಿತ್ತು ಎಂದು ಮೂಲಗಳು ಹೇಳಿವೆ. ಒಬ್ಬ ಬಸ್ ಮೇಲೆ ದಾಳಿ ನಡೆಸುವುದು, ಮತ್ತೊಬ್ಬ ಅದರ ಮೇಲೆ ಗ್ರೆನೇಡ್ ಎಸೆದು ದೊಡ್ಡ ಮಟ್ಟದಲ್ಲಿ ಪ್ರಾಣಹಾನಿ ಉಂಟುಮಾಡುವುದು ಇವರ ಉದ್ದೇಶವಾಗಿತ್ತು.
ಗಡಿಯಲ್ಲಿ ಗುಂಡಿನ ಚಕಮಕಿ ಮತ್ತೊಮ್ಮೆ ಕದನವಿರಾಮ ಉಲ್ಲಂಘಿಸುವ ಮೂಲಕ ಪಾಕಿಸ್ತಾನದ ಫೂಂಚ್ ಜಿಲ್ಲೆಯ ಸಬ್ಜಿಯಾನ್ ವಲಯದಲ್ಲಿ ನಾಗರಿಕ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಗ್ರೆನೇಡ್ ಹಾಗೂ ಮೊಟಾರ್ ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಪಡೆಗಳು ತಕ್ಕ ಪ್ರತಿದಾಳಿ ನಡೆಸಿವೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ ವರದಿಯಾಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.
ಪ್ರಾಣ ಪಣಕ್ಕೊಡ್ಡಿ, ಸಹೋದ್ಯೋಗಿಗಳನ್ನು ರಕ್ಷಿಸಿದ ರಿಕಿ ಉಧಂಪುರ ಸಮೀಪ ಬಿಎಸ್‌ಎಫ್ ಯೋಧರಿದ್ದ ಬಸ್ ಮೇಲೆ ಲಷ್ಕರೆ ಉಗ್ರರಿಬ್ಬರು ನಡೆಸಿದ ದಾಳಿ ಇನ್ನೂ ಭಯಾನಕವಾಗುವ ಸಂಭವವಿತ್ತು. ಆದರೆ ಅಷ್ಟೂ ಯೋಧರು ಹೇಗೆ ಬಚಾವಾದರೂ ಎಂಬ ರೋಚಕ ಸಂಗತಿ ಬೆಳಕಿಗೆ ಬಂದಿದೆ. 44 ಯೋಧರಿದ್ದ ಬಸ್‌ನಲ್ಲಿ ಶಸ್ತ್ರ ಸಜ್ಜಿತರಾಗಿದ್ದುದು ಕಾನ್‌ಸ್ಟೇಬಲ್ ರಾಕಿ ಮಾತ್ರ. ಇಬ್ಬರು ಹುತಾತ್ಮ ಯೋಧರಾದ ರಾಕಿ ಹಾಗೂ ಬಸ್ ಚಾಲಕ ಸುಬೇಂದು ರಾಯ್ ಉಗ್ರರ ಜತೆ ಸೆಣಸಿ ತಮ್ಮವರ ಕೂದಲು ಕೂಡ ಕೊಂಕದಂತೆ ನೋಡಿಕೊಂಡಿದ್ದರು ಎನ್ನುವ ಸತ್ಯ ಇದೀಗ ಬಹಿರಂಗಗೊಂಡಿದೆ.
ಧೀರ ಯೋಧರಾದ ರಾಕಿ ಹಾಗೂ ಸುಬೇಂದು ರಾಯ್ ದಾಳಿ ವೇಳೆ ಪ್ರತಿಕ್ರಿಯಿಸಿದ್ದು ಹೀಗೆ… * ರಸ್ತೆ ಮಧ್ಯೆ ಬಸ್ ನೆಡೆಗೆ ಗುಂಡಿನ ದಾಳಿ ನಡೆಯುತ್ತಿರುವುದನ್ನು ಗಮನಿಸಿದ ತಕ್ಷಣವೇ ತಮ್ಮಲ್ಲಿದ್ದ ರೈಫಲ್‌ನಿಂದ ರಾಕಿ ಪ್ರತಿಕ್ರಿಯೆ ನೀಡಲು ಸಜ್ಜಾದರು.
* ಉಗ್ರರ ದಾಳಿಗೆ ಬಸ್ ಚಾಲಕ ಸುಬೇಂದು ರಾಯ್ ಗಾಯಗೊಂಡಿದ್ದನ್ನು ಕೂಡ ರಾಕಿ ಗಮನಿಸಿದರು.
* ತನ್ನ ದೇಹದೊಳಗೆ ಗುಂಡು ನುಗ್ಗಿದ್ದರೂ ಹೆದರದ ಸುಬೇಂದು ಬಸ್ ಬಾಗಿಲು ತೆರೆಯಲು ಉಗ್ರನಿಗೆ ಕಿಂಚಿತ್ತೂ ಅವಕಾಶ ನೀಡಲಿಲ್ಲ.
* ರಾಕಿ ನಂತರ ಅದನ್ನು ತೆರೆಯಲು ಮತ್ತು ಒಳಗೆ ಪ್ರವೆಶಿಸಲು ಪ್ರಯತ್ನಿಸುವ ಹೊತ್ತಿಗಾಗಲೇ ಬಸ್ ಬಾಗಿಲ ಮೇಲೆ ಉಗ್ರರು ಕೂತಿದ್ದರು.
* ಉಗ್ರರು ಬಸ್‌ನೊಳಗೆ ಪ್ರವೇಶಿಸುವ ಯತ್ನದ ವೇಳೆ ರಾಕಿ ಉಗ್ರರ ಕಡೆ ಗುಂಡಿನ ಮಳೆ ಸುರಿಸಿದರು.
*ರಾಕಿ ಅದೆಂಥ ಜೋಶ್‌ನಲ್ಲಿದ್ದರೆಂದರೆ ಉಗ್ರನ ಮೇಲೆ ಎಕೆ 47ನಲ್ಲಿದ್ದ 40 ಬುಲೆಟ್‌ಗಳು ಖಾಲಿಯಾಗುವವರೆಗೆ ಟ್ರಿಗರ್ ಹಿಡಿದಿದ್ದರು.
*ರಾಕಿ ಹುತಾತ್ಮರಾದ ಮೇಲೆ ಎಕೆ 47 ಎತ್ತಿ ನೋಡಿದರೆ ಅದರೊಳಗೆ ಒಂದೂ ಬುಲೆಟ್ ಇರಲಿಲ್ಲ ಎನ್ನುತ್ತಾರೆ ಬಿಎಸ್‌ಎಫ್ ಡಿಜಿ ಪಾಠಕ್.
* ರಾಕಿಯ ಪ್ರತಿದಾಳಿಗೆ ಹೆದರಿ ಸ್ಥಳದಿಂದ ಪಲಾಯನ ಮಾಡಿದ್ದ ಇನ್ನೊಬ್ಬ ಉಗ್ರನನ್ನು ನಂತರ ಜಿವಂತವಾಗಿ ವಶಪಡಿಸಿಕೊಳ್ಳಲಾಯಿತು.