ಹೊಸದಿಲ್ಲಿ: ಮುಂಬಯಿ ಸರಣಿ ಸ್ಫೋಟದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಯಾಕೂಬ್ ಮೆಮನ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ನ್ಯಾಯಾದೀಶ ದೀಪಕ್ ಮಿಶ್ರಾಗೆ ಅನಾಮಧೇಯನಿಂದ ಜೀವ ಬೆದರಿಕೆ ಪತ್ರ ಬಂದಿದೆ.
ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ನಡುವೆ ನ್ಯಾ. ದೀಪಕ್ ಮಿಶ್ರಾ ಅವರ ಮನೆಗೆ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ.
1993ರ ಮಾರ್ಚ್‌ನಲ್ಲಿ ನಡೆದಿದ್ದ ಮುಂಬಯಿ ಸರಣಿ ಸ್ಫೋಟದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಯಾಕುಬ್ ಮೆಮೊನ್ ಕೊನೆ ಕ್ಷಣದ ಪ್ರಯತ್ನವಾಗಿ ಕ್ಷಮಾದಾನ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ. ಆಗ ಆ ಅರ್ಜಿಯ ವಿಚಾರಣೆ ನಡೆಸಿ, ಗಲ್ಲು ಶಿಕ್ಷೆಯನ್ನು ಮೂವರು ನ್ಯಾಯಾಧೀಶರು ಕಾಯಂಗೊಳಿಸಿದ್ದರು. ಇದರ ಪರಿಣಾಮವಾಗಿ 54ನೇ ಜನ್ಮದಿನದಂದೇ ಪಾತಕಿ ಯಾಕುಬ್ ಮೆಮೊನ್ ನೇಣುಕಂಬವೇರಿದ್ದ. ಗಲ್ಲು ಶಿಕ್ಷೆ ಕಾಯಂಗೊಳಿಸಿದ ಮೂವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ದೀಪಕ್ ಮಿಶ್ರಾ ಅವರಿಗೆ ಇದೀಗ ಬೆದರಿಕೆ ಪತ್ರ ಬಂದಿದ್ದು, ನಾವು ನಿನ್ನನ್ನು ಹೊಸಕಿ ಹಾಕುತ್ತೇವೆ ಎಂದು ಪ್ರಾಣ ಬೆದರಿಕೆ ಒಡ್ಡಲಾಗಿದೆ.
ಈವರೆಗೆ 1993ರಲ್ಲಿ ನಡೆದಿದ್ದ ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ಏಕೈಕ ಅಪರಾಧಿ ಯಾಕುಬ್ ಮೆಮೊನ್. 257 ಜನರ ಬಲಿ ಪಡೆದ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಸಿಗುವ ಪ್ರಕ್ರಿಯೆಯಲ್ಲಿ ದೊಡ್ಡ ಹೆಜ್ಜೆಯಾಗಿ ಯಾಕುಬ್ ಗಲ್ಲು ಶಿಕ್ಷೆ ಆತನ 54ನೇ ಜನ್ಮದಿನದಂದೇ ಜಾರಿಯಾಗಿತ್ತು.