ಚೆನ್ನೈ: ಎನ್‌ಡಿಎ ಸರಕಾರದ ಬಹು ನಿರೀಕ್ಷಿತ ಆರ್ಥಿಕ ಸುಧಾರಣೆಗಳ ವಿಧೇಯಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿವಾಸದಲ್ಲಿ ಊಟ, ಮಾತುಕತೆ ನಡಿಸಿದ್ದು ಮಹತ್ವ ಪಡೆದಿದೆ.
ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ, ಬಳಿಕ ಅಲ್ಲಿಂದ ನೇರವಾಗಿ ತಮಿಳುನಾಡು ಸಿಎಂ ನಿವಾಸಕ್ಕೆ ಆಗಮಿಸಿದರು. ಮನೆಗೆ ಬಂದ ಅಪರೂಪದ ಅತಿಥಿಯನ್ನು ಬಾಗಿಲಿಗೇ ಬಂದು ಜಯಲಲಿತಾ ಆತ್ಮೀಯುವಾಗಿ ಸ್ವಾಗತಿಸಿದರು. ಮೂಲಗಳ ಪ್ರಕಾರ, ತಮ್ಮ ನಿವಾಸದಲ್ಲಿ ಊಟಕ್ಕೆ ಬರುವಂತೆ ಪ್ರಧಾನಿಯನ್ನು ಎಐಡಿಎಂಕೆ ಮುಖ್ಯಸ್ಥೆಯೂ ಆಗಿರುವ ಜಯಲಲಿತಾ ಅವರೇ ಆಹ್ವಾನಿಸಿದ್ದರು. ಅದನ್ನು ಪ್ರಧಾನಿ ಮನ್ನಿಸಿ ಪೋಸ್ ಗಾರ್ಡನ್ ನಿವಾಸಕ್ಕೆ ತೆರಳಿದರು.
ಚರ್ಚೆಯ ನಡುವೆ ಕರ್ನಾಟಕ ಮತ್ತು ಕೇರಳ ಜತೆಗಿನ ಅಂತರ ರಾಜ್ಯ ನದಿ ವಿವಾದಗಳು ಸೇರಿದಂತೆ ತಮಿಳುನಾಡು ಪರ ನಾನಾ ವಿಷಯಗಳನ್ನು ಒಳಗೊಂಡ ಮನವಿಪತ್ರವನ್ನು ಜಯಲಲಿತಾ, ಪ್ರಧಾನಿ ಮೋದಿಗೆ ಸಲ್ಲಿಸಿದರು.
ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿವಾದಾತ್ಮಕ ಭೂಸ್ವಾಧೀನ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಎಐಡಿಎಂಕೆ ಬೆಂಬಲ ಅಗತ್ಯವಿರುವುದರಿಂದ ಹಾಗೂ ರೈತರ ಹಿತದೃಷ್ಟಿಯಿಂದ ಜಯಲಲಿತಾ ತೋರ್ಪಡಿಸಿರುವ ಕಾಳಜಿ ಹಿನ್ನೆಲೆಯಲ್ಲಿ ಕೆಲ ಅಂಶಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಎಐಎಡಿಎಂಕೆಗೆ ಲೋಕಸಭೆಯಲ್ಲಿ 37 ಹಾಗೂ ರಾಜ್ಯಸಭೆಯಲ್ಲಿ 11 ಸದಸ್ಯರಿದ್ಧಾರೆ.
ಇದಕ್ಕೂ ಮುನ್ನ ತಮಿಳುನಾಡಿಗೆ ಆಗಮಿಸಿದ ಪ್ರಧಾನಿ ಮೋದಿಯನ್ನು, ಸಿಎಂ ಜಯಲಲಿತಾ ವಿಮಾನ ನಿಲ್ದಾಣದಲ್ಲೇ ಆತ್ಮೀಯವಾಗಿ ಸ್ವಾಗತಿಸಿದ್ದರು. ಕಾರ್ಯಕ್ರಮದಲ್ಲಿ ಜಯಲಲಿತಾ ಭಾಗವಹಿಸಿದಿದ್ದರೂ, ಪ್ರಧಾನಿ ಮೋದಿ ಅವರು ಸಮಾರಂಭವನ್ನು ಅತ್ಯುತ್ತಮವಾಗಿ ಆಯೋಜಿಸಿದ ತಮಿಳುನಾಡು ಸಿಎಂ ಡಾ.ಜಯಲಲಿತಾ ಹಾಗೂ ತಮಿಳುನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದರು.