ಮುಂಬಯಿ: ಎರಡು ದಶಕಗಳ ಹಿಂದೆ ಮಹಾನಗರಿಯನ್ನೇ ನಡುಗಿಸಿದ್ದ ಧ್ವನಿಯೊಂದು ಮತ್ತೀಗ ಪೊಲೀಸರ ನಿದ್ದೆಗೆಡಿಸಿದೆ. ಭಾರತದ ‘ಮೋಸ್ಟ್ ವಾಂಟೆಡ್’ ಮುಷ್ತಾಕ್ ಟೈಗರ್ ಮೆಮೊನ್, ಮುಂಬಯಿ ಸರಣಿ ಸ್ಫೋಟದ ದೋಷಿ ಯಾಕೂಬ್ ಮೆಮೊನ್‌ಗೆ ಗಲ್ಲು ವಿಧಿಸುವ ಮುನ್ನ ಆತನ ಕುಟುಂಬದೊಂದಿಗೆ ಕರೆ ಮಾಡಿ ಮಾತನಾಡಿದ್ದಾನೆ.
1993ರಲ್ಲಿ ಮುಂಬಯಿಯ 13 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದು 257 ಮಂದಿ ಸಾವಿಗೆ ಕಾರಣವಾದ ಕೃತ್ಯಕ್ಕೆ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಈ ಟೈಗರ್ ಮೆಮನ್ ಪ್ರಮುಖ ಸೂತ್ರಧಾರರು.
ಯಾಕೂಬ್‌ಗೆ ಮರಣದಂಡನೆ ವಿಧಿಸುವ ಸಂಬಂಧವಾಗಿ ಸುಪ್ರೀಂ ಕೋರ್ಟ್ ಜು.30ರಂದ ಮುಂಜಾನೆ ಅಂತಿಮ ತೀರ್ಪು ನೀಡಿದ ನಂತರ ಹಾಗೂ ಗಲ್ಲಿಗೇರಿಸಲು ಸುಮಾರು 40 ನಿಮಿಷಗಳಿರುವಾಗ ತಾಯಿ ಸೇರಿ ಇನ್ನೊಬ್ಬ ಗುರುತಿಲ್ಲದ ಸದಸ್ಯನೊಂದಿಗೆ ಟೈಗರ್ ಸುಮಾರು ಮೂರು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾನೆ.
ಯಾಕೂಬ್ ಸಾವಿಗೆ ಪ್ರತೀಕಾರ ಪಡೆದೇ ತೀರುವುದಾಗಿ, ಸಂಭಾಷಣೆಯಲ್ಲಿ ತಿಳಿಸಿದ್ದಾನೆ. ಮಹಾರಾಷ್ಟ್ರ ಅಥವಾ ದೇಶದ ಯಾವುದೇ ಭಾಗದಲ್ಲಿ ಮತ್ತೊಂದು ಉಗ್ರ ದಾಳಿ ನಡೆಯಬಹುದೆಂಬ ಆತಂಕವೀಗ ಪೊಲೀಸರು ಹಾಗೂ ಭದ್ರತಾ ಪಡೆಯನ್ನು ಕಾಡುತ್ತಿದೆ. ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಮೂಲಕ ಟೈಗರ್ ಕರೆ ಮಾಡಿದ್ದು, ಇಂಟರ್ನೆಟ್ ಪ್ರೋಟೋಕಾಲ್ ಪತ್ತೆ ಹಚ್ಚಲಾಗದ ಕಾರಣ, ಟೈಗರ್ ವಾಸ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕುವುದು ಕಷ್ಟವಾಗಿದೆ.
ಟೈಗರ್ ಕುಟುಂಬದೊಂದಿಗೆ ಮಾತನಾಡಿದ ವಿಷಯವನ್ನು ದಿಲ್ಲಿ ಹಾಗೂ ಮುಂಬಯಿ ಭದ್ರತಾ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಆದರೆ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ಗೃಹ) ಕೆ.ಪಿ.ಭಕ್ಷಿ, ‘ಈ ಟೆಲಿಫೋನ್ ಸಂಭಾಷಣೆ ಬಗ್ಗೆ ಮಾಹಿತಿ ಇಲ್ಲ. ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಾಗಲಿ, ಕೇಂದ್ರೀಯ ಭದ್ರತಾ ಸಂಸ್ಥೆಗಳಾಗಿ ಈ ಬಗ್ಗೆ ವರದಿ ನೀಡಿಲ್ಲ,’ ಎಂದು ಹೇಳಿದ್ದಾರೆ.
ಸಂಭಾಷಣೆಯಲ್ಲಿ ಏನಿವೆ?: ಮುಂಜಾನೆ ಸುಮಾರು 5.35ರ ಹೊತ್ತಿಗೆ ರಿಂಗ್ ಆದ ಕರೆಯನ್ನು ಕುಟುಂಬದ ವ್ಯಕ್ತಿಯೊಬ್ಬರು ಸ್ವೀಕರಿಸಿದ್ದಾರೆ. ‘ಸಲಾಂ ವಾಲೇಕುಮ್’ ಎನ್ನುವ ಮೂಲಕ ನೇರವಾಗಿ ಸಂಭಾಷಣೆ ನಡೆದಿದ್ದು, ತಕ್ಷಣವೇ ಟೈಗರ್ ತಾಯಿ ಹನೀಫಾಗೆ ಫೋನ್ ನೀಡಲು ಹೇಳಿದ್ದಾನೆ.
ಮೊದಲು ಟೈಗರ್‌ನೊಂದಿಗೆ ಮಾತನಾಡಲು ನಿರಾಕರಿಸದ ತಾಯಿ, ಇತರರು ‘ಭಾಯಿಜಾನ್’ನೊಂದಿಗೆ ಮಾತನಾಡಲು ಒತ್ತಾಯಿಸಿದ್ದರಿಂದ ಮಾತನಾಡಿದ್ದಾಳೆ.
‘ನಮ್ಮೆಲ್ಲರ ಕಣ್ಣೀರಿಗೆ ಪ್ರತೀಕಾರ ತೆಗೆದೇ ತೀರುವೆ.’ ಎಂದು ಟೈಗರ್ ಹೇಳಿದಾಗ ತಾಯಿ, ‘ಸಾಕು ಮಾಡಿ ಈ ಹಿಂಸೆಯನ್ನು. ಮೊದಲ ಘಟನೆಯಿಂದ ಯಾಕೂಬ್‌ನನ್ನು ಕಳೆದುಕೊಳ್ಳಬೇಕಾಯಿತು. ಮತ್ತಷ್ಟು ಜನರು ಸಾಯುವುದನ್ನು ನಾನು ನೋಡಲಾರೆ,’ ಎಂದು ನೋವಿನಿಂದ ನುಡಿದಿದ್ದಾಳೆ. ಆಕೆಯ ನೋವಿಗೆ ಕಿವುಡನಾದ ಟೈಗರ್ ತನ್ನ ಪ್ರತೀಕಾರದ ಮಾತನ್ನು ಪುನರುಚ್ಚರಿಸಿದ್ದಾನೆ. ಹನೀಫಾ ಮತ್ತೊಬ್ಬರಿಗೆ ಪೋನ್ ನೀಡಿದಾಗಲೂ ಟೈಗರ್ ‘ಕುಟುಂಬದ ಕಣ್ಣೀರು ವ್ಯರ್ಥವಾಗುವುದಿಲ್ಲ,’ ಎಂದೇ ಹೇಳಿ, ಕರೆ ಕಟ್ ಮಾಡಿದ್ದಾನೆ.