ಮಹಾರಾಷ್ಟ್ರ: ‘ಗಂಡ- ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತಿದೆ. ಆದರೆ ಈ ಪ್ರಕರಣದಲ್ಲಿ 13 ವರ್ಷದ ಬಾಲಕ ಪ್ರಾಣ ತೆತ್ತ ಘಟನೆ ನಡೆದಿದೆ. ತನ್ನ ತಂದೆ ಜೊತೆ ಇರುವುದಾಗಿ ಹಠ ಮಾಡುತ್ತಿದ್ದ ಮಗನನ್ನು ತಾಯಿಯೊಬ್ಬಳು ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಹತ್ಯೆ ಮಾಡಿದ್ದಾಳೆ.
ಮಹಾರಾಷ್ಟ್ರದ ವಿಶ್ರಾಂತ್ ವಾಡಿಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಮಹಿಳೆ ತನ್ನ ಪತಿಯಿಂದ ವಿಚ್ಚೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳೆಂದು ಹೇಳಲಾಗಿದೆ. ತನ್ನ 13 ವರ್ಷದ ಮಗ ಚೈತನ್ನನ ಜೊತೆ ಮಹಿಳೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ತಂದೆಯನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದ ಮಗ ತಂದೆ ಬಳಿ ಹೋಗುವ ಸಲುವಾಗಿ ಹಠ ಮಾಡುತ್ತಿದ್ದನೆನ್ನಲಾಗಿದೆ.
ಗಂಡನಿಂದ ವಿಚ್ಚೇದನ ಕೋರಿದ್ದ ಮಹಿಳೆ ಮಗನ ಹಠದಿಂದ ಕೋಪಗೊಂಡು ಕ್ರಿಕೆಟ್ ಬ್ಯಾಟಿನಿಂದ ಮನಬಂದಂತೆ ಥಳಿಸಿದ್ದಾಳೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಬಳಿಕ ತಾನೇ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಬಾಲಕ ಪ್ರಾಣ ಬಿಟ್ಟಿದ್ದು, ವಿಶ್ರಾಂತ್ ವಾಡಿ ಪೊಲೀಸರು ತನ್ನ ಮಗನ ಕೊಂದ ತಾಯಿಯನ್ನು ಈಗ ಬಂಧಿಸಿದ್ದಾರೆ.