ಮನೋರಂಜನೆ

ಸಂಗೀತ ಮಾಂತ್ರಿಕ ರೆಹಮಾನ್ ಅವರ ಆತ್ಮಕಥೆ ಸಿನಿಮಾ ಆಗುತ್ತಿದೆಯೇ ?

Pinterest LinkedIn Tumblr

rehman

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ಮ್ಯೂಸಿಕಲ್ ಲವ್ ಸ್ಟೋರಿ ಚಿತ್ರವೊಂದಕ್ಕೆ ಚಿತ್ರಕಥೆ ಹೆಣೆದಿದ್ದಾರೆ. ಈ ವರ್ಷದ ಕೊನೆಗೆ ಸೆಟ್ಟೇರಲಿರುವ ಈ ಸಿನಿಮಾ ಅವರ ಜೀವನಕಥೆ ಎನ್ನುವ ವದಂತಿಯೂ ಹರಡಿದೆ.

ಇದು ಅಧಿಕೃತ. ಸಂಗೀತ ಸಂಯೋಜಕ ಎ.ಆರ್. ರೆಹಮಾನ್‌ರ ಸಿನಿಮಾಗೆ ’99 ಸಾಂಗ್ಸ್’ ಎಂದು ನಾಮಕರಣವಾಗಿದೆ. ಹಿಂದಿಯಲ್ಲಿ ತಯಾರಾಗಲಿರುವ ಸಿನಿಮಾ ತಮಿಳು ಭಾಷೆಗೂ ಡಬ್ ಆಗಲಿದೆಯಂತೆ. ಈ ಮ್ಯೂಸಿಕಲ್ ಲವ್‌ಸ್ಟೋರಿ ಸಿನಿಮಾಗೆ ರೆಹಮಾನ್ ಹಣ ಹೂಡುತ್ತಿದ್ದಾರೆ. ಪ್ರತಿಭಾವಂತ ಸಂಗೀತಗಾರನೊಬ್ಬ ಸಂಗೀತದ ಮೂಲಕ ತನ್ನನ್ನು ತಾನು ಕಂಡುಕೊಳ್ಳುವ ಪರಿ ಸಿನಿಮಾದ ವಸ್ತು. ಇದು ರೆಹಮಾನ್ ಅವರ ಆತ್ಮಕಥೆ ಎನ್ನುವ ವದಂತಿಯೂ ಹರಡಿದೆ. ಆದರೆ ರೆಹಮಾನ್ ಇದನ್ನು ಅಲ್ಲಗಳೆದಿದ್ದಾರೆ.

‘ಚಿತ್ರಕ್ಕೆ ಸಂಗೀತವೇ ಜೀವಾಳ. ಅವಕಾಶಕ್ಕಾಗಿ ಪ್ರತಿಭಾವಂತ ಯುವ ಗಾಯಕನ ಹೋರಾಟ, ಈ ಹಾದಿಯಲ್ಲಿ ಅವನು ಎದುರಿಸುವ ಸವಾಲುಗಳು ಚಿತ್ರಕಥೆಯಲ್ಲಿ ಹಾದುಹೋಗಲಿವೆ. ಖಂಡಿತ ಇದು ರೆಹಮಾನ್ ಆತ್ಮಕಥೆಯಲ್ಲ. ಇದೊಂದು ಪ್ರೇಮಕಥೆ. ಆದರೆ ಪ್ರೀತಿಗಿಂತ ಸಂಗೀತ ಹಾಗೂ ವ್ಯಕ್ತಿಯೊಬ್ಬನ ನಿಜವಾದ ಸಾಮರ್ಥ್ಯಗಳ ಕುರಿತಾದ ವಸ್ತುವಿನ ಮೇಲೆ ಸಿನಿಮಾ ಬೆಳಕು ಚೆಲ್ಲಲಿದೆ. ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ಅವರ ವೃತ್ತಿ ಬದುಕಿನಲ್ಲಿ ಈ ಸಿನಿಮಾ ಮಹತ್ವದ ಮೈಲುಗಲ್ಲಾಗುತ್ತದೆ’ ಎಂಬ ಮಾತುಗಳು ಸಿನಿಮಾ ವಲಯದಲ್ಲಿ ಕೇಳಿಬರುತ್ತಿವೆ.

ಹಾಲಿವುಡ್‌ಗೆ ಹಾರಿದ್ದ ನಲವತ್ತೇಳರ ಹರೆಯದ ರೆಹಮಾನ್ ಸದ್ಯ ಬಾಲಿವುಡ್‌ನಲ್ಲಿ ಬಿಝಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ಅವರು ರಣಬೀರ್ ಕಪೂರ್-ದೀಪಿಕಾ ಪಡುಕೋಣೆ ಅಭಿನಯದ ‘ತಮಾಷಾ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದರು. ಪ್ರಸ್ತುತ ಅಶಿತೋಷ್ ಗೌರೀಕರ್ ನಿರ್ದೇಶನದಲ್ಲಿ ಹೃತಿಕ್ ರೋಷನ್ ನಟಿಸುತ್ತಿರುವ ‘ಮೆಹೆಂಜೋದಾರೋ’ ಚಿತ್ರಕ್ಕೆ ಸಂಗೀತದ ಮಟ್ಟು ಹಾಕುತ್ತಿದ್ದಾರೆ. ‘ಹೃತಿಕ್ ಚಿತ್ರದ ನಂತರ ರೆಹಮಾನ್ ಸಂಪೂರ್ಣವಾಗಿ ತಮ್ಮ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹಾಗೆ ನೋಡಿದರೆ ಈ ಚಿತ್ರದೊಂದಿಗೆ ಅವರು ನಿರ್ದೇಶಕನಾಗಬೇಕಿತ್ತು. ಆದರೆ ಅವರು ಇಂಗ್ಲಿಷ್, ತಮಿಳು, ಹಿಂದಿ ಚಿತ್ರಗಳ ಸಂಗೀತ ಸಂಯೋಜನೆ ಒಪ್ಪಿಕೊಂಡಿದ್ದಾರೆ. ನಿರ್ದೇಶನಕ್ಕೆ ಸಮಯ ಇಲ್ಲದ ಕಾರಣ ಯುವ ಪ್ರತಿಭಾವಂತ ನಿರ್ದೇಶಕ ವಿಶ್ವೇಶ್ ಕೃಷ್ಣಮೂರ್ತಿಗೆ ಅವಕಾಶ ಕಲ್ಪಿಸಿದ್ದಾರೆ’ ಎಂದು ಬಾಲಿವುಡ್ ಮೂಲಗಳು ಹೇಳುತ್ತಿವೆ.

ತಮ್ಮ ವೈ.ಎಂ.ಮೂವೀಸ್ ಬ್ಯಾನರ್‌ನಡಿ ರೆಹಮಾನ್ ’99 ಸಾಂಗ್ಸ್’ ಸಿನಿಮಾ ನಿರ್ಮಿಸುತ್ತಿದ್ದಾರೆ. ಇದು ಅವರ ಸಂಸ್ಥೆಯ ಚೊಚ್ಚಲ ಪ್ರಾಜೆಕ್ಟ್. ಚಿತ್ರಕ್ಕೆ ಮತ್ತೊಬ್ಬ ನಿರ್ಮಾಪಕ ಕೂಡ ಹಣ ಹೂಡುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಕಲಾವಿದರ ಹುಡುಕಾಟ ನಡೆದಿದೆ. ‘ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಸಂಗೀತ ಸಂಯೋಜಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಧ್ಯವಾದಷ್ಟೂ ಸಂಗೀತ ಜ್ಞಾನವಿರುವ ನಟನನ್ನೇ ಆಯ್ಕೆ ಮಾಡುವುದು ರೆಹಮಾನ್ ಗುರಿ. ಉಳಿದಂತೆ ಹೊಸ ನಟ-ನಟಿಯರೇ ಇರುತ್ತಾರೆ. ಚಿತ್ರದಲ್ಲಿ ಅಂತಾರಾಷ್ಟ್ರೀಯ ಸಂಗೀತಗಾರರು ಹಾಗೂ ಕಲಾವಿದರೂ ನಟಿಸಲಿದ್ದಾರೆ’ ಎಂದು ರೆಹಮಾನ್ ಆಪ್ತ ವಲಯಗಳು ಹೇಳುವ ಮಾತು.

Write A Comment