ಭುವನೇಶ್ವರ: ಬಂಧನಕ್ಕಾಗಿ ಆಗ್ರಹಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ವಂಚನೆ ಹಾಗೂ ಇತರೆ ಪ್ರಕರಣಗಳ ಆರೋಪದ ಮೇಲೆ ಸ್ವಯಂಘೋಷಿತ, ‘ವಿವಾದಾತ್ಮಕ ದೇವ ಮಾನವ’ ಸಾರಥಿ ಬಾಬಾ ಅವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಕೇಂದ್ರಪರ ಜಿಲ್ಲೆಯ ಬಾರಿಮುಲಾ ಆಶ್ರಮ ಹಾಗೂ ಕಟಕ್‌ನ ಅಪರಾಧ ದಳದ ಮುಖ್ಯ ಕಚೇರಿಯಲ್ಲಿ ಪೊಲೀಸರು ಸಾರಥಿ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಎಡಿಜಿ ಬಿ.ಕೆ.ಶರ್ಮಾ ಖಚಿತಪಡಿಸಿದ್ದಾರೆ.
ಸಾರಥಿ ಆಶ್ರಮಕ್ಕೆ ಶುಕ್ರವಾರ ತೆರಳಿದ ಪೊಲೀಸರು, ಅವರನ್ನು ವಿಚಾರಣೆ ನಡೆಸಿ, ಚೆಲ್ಲಾಪಿಲ್ಲಿಯಾಗಿದ್ದ ಆಶ್ರಮವನ್ನು ತಡಕಾಡಿದ್ದಾರೆ. ಕೆಲವು ದಾಖಲೆಗಳು, ನಗದು, ಚಿನ್ನ, ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
‘ಕೆಲವು ಬ್ಯಾಂಕ್ ಅಕೌಂಟ್ ಖಾತೆಗಳು, ಫೋಟೋಗಳು ಮತ್ತು ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳು ದೊರೆತಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ,’ ಎಂದು ಅಪರಾಧ ವಿಭಾಗ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಅಪರಾಧ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), ಅಪರಾಧಕ್ಕೆ ಸಂಚು ಸೇರಿ ನಾನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಬಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
‘ಬಾಬಾ ಅವರು ಹೈದರಾಬಾದ್ ಹೋಟೆಲ್‌ವೊಂದರಲ್ಲಿ ಮಹಿಳೆಯೊಂದಿಗೆ ಎರಡು ದಿನಗಳ ಕಾಲ ಕಳೆದಿದ್ದರು’, ಎಂದು ಆರೋಪಿಸಿ ಸುದ್ದಿವಾಹಿನಿಯೊಂದು ಮಹಿಳೆಯೊಬ್ಬಳು ಸಾರಥಿಯೊಂದಿಗೆ ಪತ್ನಿಯಂತೆ ಫೋಸ್ ನೀಡಿದ ಚಿತ್ರಗಳನ್ನು ಪ್ರಸಾರ ಮಾಡಿತ್ತು. ಬಾಬಾ ಟಿವಿ ಚಾನೆಲ್ ವಿರುದ್ಧ ಹರಿಹಾಯ್ದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಸಾರಥಿ ವಿರುದ್ಧ ಸೂಕ್ತ ತನಿಖೆ ನಡೆಸಲು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆದೇಶಿಸಿದ್ದು, ಆಶ್ರಮದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಹೇರಲಾಗಿದೆ.