ನವದೆಹಲಿ: ರಾಮ್ ನಾಥ್ ಕೋವಿಂದ್ ಬಿಹಾರದ ಹೊಸ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಕುರಿತಂತೆ ನನಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ಯಾರೊಬ್ಬರು ನನ್ನ ಅಭಿಪ್ರಾಯವನ್ನೇ ಕೇಳಿಲ್ಲ ಎಂದು ಹೇಳುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಪಾಲ ನೇಮಕಾತಿ ಬಗ್ಗೆ ತಮ್ಮ ಅಸಮಾಧಾನವನ್ನು ಶನಿವಾರ ಹೊರಹಾಕಿದ್ದಾರೆ….
ಬಿಹಾರ ರಾಜ್ಯದ ಹೊಸ ರಾಜ್ಯಪಾಲರಾಗಿ ಆಯ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರ ನೇಮಕ ಮಾಡುವಾಗ ಗೃಹ ಸಚಿವರೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿಯ ಅಭಿಪ್ರಾಯ ಕೇಳುತ್ತಿತ್ತು. ಆದರೆ, ಇದೀಗ ನಮ್ಮ ಸಲಹೆಯನ್ನು ಕೇಳದೆ ರಾಜ್ಯಪಾಲರ ನೇಮಕ ಮಾಡಲಾಗಿದೆ. ರಾಜ್ಯಪಾಲರ ನೇಮಕ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ಮಾಧ್ಯಮಗಳ ಸುದ್ದಿಯಿಂದ ನನಗೆ ಮಾಹಿತಿ ತಿಳಿಯಿತು ಎಂದು ಹೇಳಿದ್ದಾರೆ.
ಇನ್ನು ಕೆಲವೇ ತಿಂಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ರಾಜ್ಯಪಾಲರ ಅವಶ್ಯಕವಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದೆ. 69 ವರ್ಷದ ರಾಮ್ ನಾಥ್ ಕೋವಿಂದ್ ಅವರು 1994-2006ರ ಅವಧಿಯಲ್ಲಿ ಉತ್ತರ ಪ್ರದೇಶದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಪರಿಶಿಷ್ಟ ಮೋರ್ಚಾದ ಮುಖ್ಯಸ್ಥ ರಾಗಿರುವ ಕೋವಿಂದ್ ವೃತ್ತಿಯಲ್ಲಿ ವಕೀಲರಾಗಿ ಕೆಲಸ ಮಾಡಿದ್ದಾರೆ.