ನವದೆಹಲಿ: 1993 ಮುಂಬೈ ಸರಣಿ ಸ್ಪೋಟ ಪ್ರಕರಣದ ಆರೋಪಿ ಉಗ್ರ ಯಾಕುಬ್ ಮೆಮನ್ ಗಲ್ಲು ಶಿಕ್ಷೆ ಕುರಿತಂತೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದ 3 ಖಾಸಗಿ ಸುದ್ದಿ ವಾಹಿನಿಗಳಿಗೆ ಕೇಂದ್ರ ಸರ್ಕಾರ ಶನಿವಾರ ನೋಟಿಸ್ ಜಾರಿ ಮಾಡಿದೆ.
ರಾಷ್ಟ್ರೀಯ ವಾಹಿನಿಗಳಾದ ಎಬಿಪಿ ನ್ಯೂಸ್, ಎನ್ ಡಿಟಿವಿ 24×7 ಹಾಗೂ ಆಜ್ ತಕ್ ಸುದ್ದಿ ವಾಹಿನಿಗಳು ಮೆಮನ್ ಗೆ ಗಲ್ಲು ಜಾರಿಯಾದ ದಿನದಂದು ಆತನ ಪರವಾದ ಕೆಲವು ಸುದ್ದಿಗಳನ್ನು ಪ್ರಸಾರ ಮಾಡಿತ್ತು. ಈದೀಗ ಈ ವಿಶೇಷ ಕಾರ್ಯಕ್ರಮಗಳ ವಿರುದ್ಧ ಟಿವಿ ವಾಹಿನಿಗಳ ಮೇಲೆ ಕೆಂಡಮಂಡಲವಾಗಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮೂರು ಸುದ್ದಿ ವಾಹಿನಿಗಳು ಸುಪ್ರೀಂಕೋರ್ಟ್ ಹಾಗೂ ರಾಷ್ಟ್ಪಪತಿಯವರಿಗೆ ಅಗೌರವ ಸೂಚಿಸಿದೆ ಎಂದು ಹೇಳಿ ವಾಹಿನಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 15 ದಿನಗಳೊಳಗಾಗಿ ನೋಟಿಸ್ ಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಜುಲೈ.30 ರಂದು ಉಗ್ರ ಯಾಕುಬ್ ಮೆಮನ್ ನನ್ನು ಗಲ್ಲಿಗೇರಿಸಲಾಗಿತ್ತು. ಹೀಗಾಗಿ ಯಾಕುಬ್ ಮೆಮನ್ ಕುರಿತಂತೆ ಈ ಮೂರು ಸುದ್ದಿ ವಾಹಿನಿಗಳು ಯಾಕುಬ್ ಮೆಮನ್ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಮೂರು ಸುದ್ದಿ ವಾಹಿನಿಗಳಲ್ಲಿ 2 ಹಿಂದಿ ಸುದ್ದಿ ವಾಹಿನಿಗಳಾಗಿದ್ದು, ಆಜ್ ತಕ್ ಹಾಗೂ ಎಬಿಪಿ ವಾಹಿನಗಳು ಚೋಟಾ ಶಕೀಲ್ ನನ್ನು ಫೋನ್ ಮೂಲಕ ಸಂಪರ್ಕಿಸಿ ನೇರ ಸಂದರ್ಶನ ನಡೆಸಿದ್ದವು. ದೂರವಾಣಿಯಲ್ಲಿ ಮಾತನಾಡಿದ್ದ ಚೋಟಾ ಶಕೀಲ್, ಯಾಕುಬ್ ಒಬ್ಬ ಮುಗ್ಧ ವ್ಯಕ್ತಿ. ಗಲ್ಲುಶಿಕ್ಷೆಯು ನ್ಯಾಯಯುತ ಶಿಕ್ಷೆಯಲ್ಲ. ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲ ಎಂದು ಹೇಳಿದ್ದ. ಮತ್ತೊಂದು ಆಂಗ್ಲ ಖಾಸಗಿ ಸುದ್ದಿ ವಾಹಿನಿಯಾದ ಎನ್ ಡಿಟಿವಿಯು ಯಾಕುಬ್ ಪರ ವಕೀಲರೊಂದಿಗೆ ನೇರ ಸಂದರ್ಶನ ನಡೆಸಿ ಚರ್ಚೆ ನಡೆಸಿತ್ತು ಸಂದರ್ಶನದಲ್ಲಿ ವಕೀಲ ಜಾಗತಿವಾಗಿ ವಿವಿಧ ರಾಷ್ಟ್ರಗಳು ಗಲ್ಲು ಶಿಕ್ಷೆಯನ್ನು ನಿಷೇಧಿಸಿದೆ. ಆದರೆ, ಭಾರತದಲ್ಲಿ ಇಂದಿಗೂ ಈ ಶಿಕ್ಷೆ ಪ್ರಗತಿಯಲ್ಲಿದೆ ಎಂದು ಹೇಳಿದ್ದರು.
ಇದೀಗ ಈ ಮೂರು ವಾಹಿನಿಗಳು 1994ರ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ರೂಲ್ಸ್ ನಲ್ಲಿರುವ ಸೆಕ್ಷನ್ 1 (ಡಿ), ಸೆಕ್ಷನ್ 1 (ಜಿ) ಹಾಗೂ ಸೆಕ್ಷನ್ 1 (ಇ) ಪ್ರಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಚೋಟಾ ಶಕೀಲ್ ಮತ್ತು ಯಾಕುಬ್ ಮೆಮನ್ ವಕೀಲರ ಸಂದರ್ಶನಗಳ ವಿಡೀಯೋ ಕ್ಲಿಪ್ ಗಳನ್ನು ಈಗಾಗಲೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಶಕ್ಕೆ ಪಡೆದುಕೊಂಡಿದೆ.
ಸರ್ಕಾರ ನೀಡಿರುವ ನೋಟಿಸ್ ಕುರಿತಂತೆ ಈಗಾಗಲೇ ವಿರೋಧ ವ್ಯಕ್ತಪಡಿಸಿರುವ ಮಾಧ್ಯಮ ಪತ್ರಕರ್ತರು, ನೋಟಿಸ್ ನಿಂದ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದು, ಸರ್ಕಾರ ಈ ಕ್ರಮ ಪತ್ರಕರ್ತರ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಹಾಕಿದೆ. ಕೂಡಲೇ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕಿದ್ದು, ನೋಟಿಸ್ ನ್ನು ಹಿಂಪಡೆಯುವಂತೆ ಆಗ್ರಹಿಸಿವೆ ಎಂದು ತಿಳಿದುಬಂದಿದೆ.