ಕಷ್ಟದಲ್ಲಿ ಸಿಲುಕಿರುವ ಭಕ್ತರಿಗೆ ದೇವರು ಸಹಾಯ ಮಾಡುತ್ತಾನೆ ಎಂಬ ನಂಬಿಕೆ ಸಹಜ. ಆದರೆ ಈ ದೇವಮಾನವರ ಪ್ರಕರಣದಲ್ಲಿ ಇದು ಸಂಪೂರ್ಣ ತದ್ವಿರುದ್ಧ. ದೇವಮಾನವರು ಕಷ್ಟಕ್ಕೆ ಸಿಲುಕಿಕೊಂದರೆ ಭಕ್ತರೇ ಕಾಪಾಡಬೇಕು. ಸದ್ಯ ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ವಿಷಯದಲ್ಲೂ ಹೀಗೇ ಆಗಿದೆ.
ಖ್ಯಾತ ಚಲನಚಿತ್ರ ನಿರ್ದೇಶಕ ಸುಭಾಷ್ ಘಾಯ್ ಹಾಗೂ ರಾಖಿ ಸಾವಂತ್, ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ಬೆಂಬಲಕ್ಕೆ ಧಾವಿಸಿದ್ದಾರೆ. ಫೆಸ್ ಬುಕ್ ನಲ್ಲಿ ರಾಧೇ ಮಾ ಗೆ ಬೆಂಬಲ ಸೂಚಿಸಿರುವ ಸುಭಾಷ್ ಘಾಯ್ “ನಾನು ಮತ್ತು ನನ್ನ ಪತ್ನಿ ಮುಕ್ತಾ ಕಳೆದ ವರ್ಷದಿಂದ ರಾಧೇ ಮಾ ಭಕ್ತರಾಗಿದ್ದು ಅವರ ಆಶೀರ್ವಾದ ಪಡೆಯಲು ತೆರಳುತ್ತಿದ್ದೆವು ಎಂದು ಹೇಳಿದ್ದಾರೆ.
ಇನ್ನು ರಾಖಿ ಸಾವಂತ್ ಕೂಡ ರಾಧೇ ಮಾ ಅವರಿಗೆ ಬೆಂಬಲಿಸಿದ್ದು, ರಾಧೇ ಮಾ ಸುತ್ತ ವಿಭಿನ್ನವಾದ ದಿವ್ಯಕಾಂತಿ ಇದ್ದು, ಆಕೆ ಧನಾತ್ಮಕ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ನನಗೆ ಶಕ್ತಿ ತುಂಬುವ ರಾಧೇ ಮಾ ನ್ನು ಗೌರವಿಸುತ್ತೇನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಜಾಹೀರಾತು ಚಿತ್ರನಿರ್ದೇಶಕ ಪ್ರಹ್ಲಾದ್ ಕಕ್ಕರ್ ಕೂಡಾ ರಾಧೇ ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಧೇ ಮಾ ಅವರ ವಿಭಿನ್ನ ಶೈಲಿಯೇ ಅವರನ್ನು ವಿಶಿಷ್ಟ ದೇವಮಹಿಳೆಯನ್ನಾಗಿಸಿದೆ ಎಂದು ಹೇಳಿದ್ದಾರೆ. ಮಿನಿಸ್ಕರ್ಟ್ ಧರಿಸಿ ಸುಂದರವಾಗಿ ಕಾಣುವುದು ಎಲ್ಲಾ ಮಹಿಳೆಯರ ಹಕ್ಕು ಎಂದು ಹೇಳಿರುವ ಡಾಲಿ ಬಿಂದ್ರಾ ಸಹ ರಾಧೇ ಮಾ ಅವರನ್ನು ಬೆಂಬಲಿಸಿದ್ದಾರೆ. ಆದರೆ ರಿಷಿ ಕಪೂರ್ ಮಾತ್ರ ಟ್ವಿಟರ್ ನಲ್ಲಿ ರಾಧೇ ಮಾ ಬಗ್ಗೆ ವ್ಯಂಗ್ಯವಾಗಿ ಕಾಮೆಂಟ್ ಮಾಡಿ ಟೀಕಿಸಿದ್ದಾರೆ.