ಹೈದರಾಬಾದ್: ತಿರುಪತಿ ತಿಮ್ಮಪ್ಪನ ಬಗ್ಗೆ ತಿಳಿದವರೆಲ್ಲರನ್ನೂ ಕಾಡುವ ಏಕೈಕ ಪ್ರಶ್ನೆ, ತಿರುಮಲ ದೇಗುಲದ ವೆಂಕಟೇಶ್ವರ ಎಷ್ಟು ಶ್ರೀಮಂತ?
ಈವರೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಿಮಗೆ ಗೊತ್ತಿರಲಿ, ಬ್ಯಾಂಕ್‌ನಲ್ಲಿರುವ ತಿರುಮಲದ 4.5 ಟನ್ ಚಿನ್ನ ಪ್ರತಿ ವರ್ಷ 80 ಕಿಲೊ ಬಂಗಾರದ ಬಡ್ಡಿ ಕೊಡುತ್ತದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳ ಪ್ರಕಾರ, ನಾನಾ ಬ್ಯಾಂಕ್‌ಗಳಲ್ಲಿ ತಿಮ್ಮಪ್ಪನ 4.5 ಟನ್ ಬಂಗಾರವನ್ನು ಠೇವಣಿ ಇರಿಸಲಾಗಿದ್ದು, ಇನ್ನೂ ಒಂದು ಟನ್ ಬಂಗಾರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸದ್ಯದಲ್ಲೇ ಠೇವಣಿ ಇರಿಸಲು ಸಿದ್ಧತೆ ನಡೆಸಲಾಗಿದೆ.
ಸದ್ಯದ ದರದ ಪ್ರಕಾರ ಒಟ್ಟಾರೆ 5500 ಕೆಜಿ ಚಿನ್ನದ ಬೆಲೆ 1320 ಕೋಟಿ ರೂ. ಆಗುತ್ತದೆ ಎಂದು ಟಿಟಿಡಿ ಲೆಕ್ಕಾಚಾರ ಹಾಕಿದೆ. ದೇಶದ ಅತಿ ಶ್ರೀಮಂತ ದೇವಸ್ಥಾನದ ಅಧಿಕಾರಿಗಳ ಪ್ರಕಾರ ತಿಮ್ಮಪ್ಪನ ಒಟ್ಟು ಸ್ವತ್ತಿನ ಸಣ್ಣ ಅಂಶವಿದು. ಕೇರಳದ ಅನಂತಪದ್ಮನಾಭ ದೇವಸ್ಥಾನದಲ್ಲಿ ಒಂದು ಲಕ್ಷ ಕೋಟಿ ರೂ. ಮೌಲ್ಯದ ಸೊತ್ತು ಇರುವುದಾಗಿ ಈಗಾಗಲೇ ಬಹಿರಂಗವಾಗಿದೆ ನಿಜ. ಆದರೆ ತಿರುಪತಿಯ ವೆಂಕಟೇಶ್ವರ ಸೊತ್ತುಗಳ ಒಟ್ಟು ಮೊತ್ತವನ್ನು ಈವರೆಗೂ ಸಾರ್ವಜನಿಕವಾಗಿ ಬಹಿರಂಗ ಪಡಿಸಿಲ್ಲ. ಆದರೆ ಇದು ಕೇರಳದ ಅನಂತಪದ್ಮನಾಭ ದೇವಸ್ಥಾನಕ್ಕಿಂತಲೂ ಅಧಿಕ ಶ್ರೀಮಂತ ಎನ್ನಲಾಗುತ್ತದೆ.
ತಿರುಮಲದಲ್ಲಿ ಅರ್ಜಿತ ಸೇವೆಯ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಟಿಟಿಡಿ ಆಡಳಿತ ಅಧಿಕಾರಿ ಡಿ.ಸಾಂಬಶಿವ ರಾವ್, ಇನ್ನೂ ಒಂದು ಟನ್ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬಗ್ಗೆ ತಿಳಿಸಿದರು. ಟೈಮ್ಸ್ ಆಫ್ ಇಂಡಿಯಾ ಅವರ ಜತೆ ಫೋನ್‌ನಲ್ಲಿ ಹೆಚ್ಚಿನ ಮಾಹಿತಿ ಕೇಳಿದಾಗ, ನಾನಾ ಬ್ಯಾಂಕ್‌ಗಳಲ್ಲಿ 4.5 ಟನ್ ಚಿನ್ನ ಠೇವಣಿ ಇಟ್ಟಿರುವ ಮಾಹಿತಿ ನೀಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್‌ಗಳಲ್ಲಿ ಬಂಗಾರವನ್ನು ಠೇವಣಿ ಇಡಲಾಗಿದೆ. ಇನ್ನು ಒಂದು ಟನ್ ಚಿನ್ನವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೀಘ್ರದಲ್ಲೇ ಠೇವಣಿ ಇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗೋಲ್ಡ್ ಸ್ಕೀಮ್‌ನಲ್ಲಿ ಚಿನ್ನ ಠೇವಣಿ ಇಟ್ಟಿರುವುದಿರಂದ ಟಿಟಿಡಿಗೆ ಹಣದ ರೂಪದ ಬದಲು ಬಂಗಾರದ ರೂಪದಲ್ಲೇ ಬಡ್ಡಿ ಸಿಗಲಿದೆಯಂತೆ. ಹೇಗಿದೆ ತಿರುಪತಿ ತಿಮ್ಮಪ್ಪನ ಚಿನ್ನ ಮರಿ ಇಡುವ ರೀತಿ?