ಸಬಂಗ್(ಕೊಲ್ಕತಾ): ಸಚಿವನನ್ನು ಸನ್ಮಾನಿಸಲೊಪ್ಪದ ಕಾರಣಕ್ಕೆ ಪಶ್ಚಿಮ ಮಿಡ್ನಾಪುರದ ಸಬಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬನನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಹೊಡೆದು ಕೊಂದಿದ್ದಾರೆ.
ರಾಜ್ಯದ ಎಲ್ಲ ಕ್ಯಾಂಪಸ್‌ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ಪಶ್ಚಿಮ ಬಂಗಾಳದ ಆಡಳಿತರೂಢ ಪಕ್ಷವಾದ ಟಿಎಂಸಿಯ ಬಾಹುಬಲ ಪ್ರದರ್ಶನಕ್ಕೆ ಶುಕ್ರವಾರ ಬೆಳಗ್ಗೆ ನಡೆದ ಘಟನೆ ಸಾಕ್ಷಿಯಾಗಿದೆ. ಈ ಘಟನೆಯಿಂದ ಕೆರಳಿರುವ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ರಾಜ್ಯದೆಲ್ಲೆಡೆ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಘಟನೆಯನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಇದರಲ್ಲಿ ತೃಣಮೂಲ ವಿದ್ಯಾರ್ಥಿ ಪರಿಷತ್‌ನ ಕೈವಾಡವಿಲ್ಲ ಎಂದು ಹೇಳಿದ್ದಾರೆ. ಜತೆಗೆ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಅನ್ನು ದೂರಿರುವ ಮಮತಾ, ಅವರು ಪ್ರಾಂಶುಪಾಲರನ್ನು ಕೊಠಡಿಯಲ್ಲಿ ಕೂಡಿಹಾಕಿದ್ದರು ಎಂದು ತಿಳಿಸಿದ್ದಾರೆ.
ಕಾಲೇಜಿನಲ್ಲಿ ನಡೆದಿರುವ ಘಟನೆ ನನಗೆ ಆಘಾತ ಹಾಗೂ ನೋವು ತಂದಿದೆ ಎಂದಿರುವ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಅದರೆ ಕೊಲೆಯಾದ ಕೃಷ್ಣ ಪ್ರಸಾದ್ ಜನಾ ಹೊರಗಿನಿಂದ ಬಂದವನು. ಆತ ಕಾಲೇಜಲ್ಲಿ ಏನು ಮಾಡುತ್ತಿದ್ದ ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ.
ಏನಾಗಿತ್ತು?
ಶುಕ್ರವಾರ ಮಧ್ಯಾಹ್ನ 1.30ಕ್ಕೆ ತೃಣಮೂಲ ವಿದ್ಯಾರ್ಥಿ ಪರಿಷತ್‌ನ ಬೆಂಬಲಿಗರು ಹಾಗೂ ಹೊರಗಿನವರು ಸಬಂಗ್ ಸಜನಿಕಾಂತ ಮಹಾವಿದ್ಯಾಲಯದ ಆವರಣಕ್ಕೆ ನುಗ್ಗಿದ್ದರು. ಆ ಕಾಲೇಜು ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ನಿಯಂತ್ರಣದಲ್ಲಿದೆ. ವಿದ್ಯಾರ್ಥಿ ಒಕ್ಕೂಟದ ಕೊಠಡಿ ತೃಣಮೂಲ ವಿದ್ಯಾರ್ಥಿ ಪರಿಷತ್‌ಗೆ ಜೈಕಾರ ಹಾಕುತ್ತ ನುಗ್ಗಿ ಬಂದವರು, ಸಬಂಗ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶದ ವೀಕ್ಷಣೆಗೆ ತೃಣಮೂಲ ಕಾಂಗ್ರೆಸ್‌ನ ಸಚಿವ ಸೌಮೆನ್ ಮಹಾಪಾತ್ರ ಅವರನ್ನು ಸನ್ಮಾನಿಸುವಂತೆ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಬೆಂಬಲಿಗರನ್ನು ಒತ್ತಾಯಿಸಿದರು.
ಇದಕ್ಕೆ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಸದಸ್ಯರು ನಿರಾಕರಿಸಿದರು. ಅವರ ನಿರಾಕರಣೆಯಲ್ಲಿ ದೊಡ್ಡ ಧ್ವನಿಯಾಗಿದ್ದು ಕೃಷ್ಣ ಪ್ರಸಾದ್ ಜನಾ. ನಾವೇಕೆ ಬರಬೇಕು? ನಿಮ್ಮ ಸಚಿವ ಈ ಪ್ರದೇಶಕ್ಕೆ ಬಂದಿದ್ದಾರೆ ಎನ್ನುವ ಕಾರಣಕ್ಕೆ ನಾವು ಬರುವುದಿಲ್ಲ ಎಂದು ತೃಣಮೂಲ ವಿದ್ಯಾರ್ಥಿ ಪರಿಷತ್‌ನ ಬೆಂಬಲಿಗರಿಗೆ ಕೃಷ್ಣ ಧ್ವನಿ ಎತ್ತರಿಸಿ ಹೇಳಿದರು. ಇದರಿಂದ ಕೆರಳಿದ ಟಿಎಂಸಿ ಪರ ಯುವಕರು ಕೃಷ್ಣನನ್ನು ಎಳೆದಾಡಿ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಲೈಬ್ರೆರಿ ಮುಂದೆಯೇ ನಡೆದ ಈ ಭಯಾನಕ ಘಟನೆಗೆ ಎಲ್ಲ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು.
ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್‌ನ ಇಬ್ಬರು ಕೃಷ್ಣನ ರಕ್ಷಣೆಗೆ ಬಂದರೂ ಅವರಿಗೂ ಹಲ್ಲೆ ನಡೆಸಲಾಯಿತು. ಬಳಿಕ ಆತನನ್ನು ಕೆಲ ಟಿಎಂಸಿ ಮಂದಿ ವಿದ್ಯಾರ್ಥಿ ಒಕ್ಕೂಟದ ಕೊಠಡಿಯ ಬಾಗಿಲನ್ನು ಹೊರಗಿನಿಂದ ಮುಚ್ಚಿ, ಕೃಷ್ಣನಿಗೆ ಥಳಿಸುವುದನ್ನು ಮುಂದುವರಿಸಿದರು. ಆತನ ಕಣ್ಣು, ಮೂಗಿನಿಂದ ರಕ್ತ ಸುರಿದರೂ ಅವರು ಬಿಡಲಿಲ್ಲ. ಪ್ರಾಂಶುಪಾಲರನ್ನು ಅವರ ಕೊಠಡಿಯಲ್ಲೇ ಕೂಡಿ ಹಾಕಲಾಗಿತ್ತು. ಅವರು ಕೂಡ ಸಹಾಯಕ್ಕೆ ಬರದಂಥ ಸ್ಥಿತಿ ಇತ್ತು ಎನ್ನಲಾಗಿದೆ.