ರಾಂಚಿ (ಪಿಟಿಐ): ಶ್ರಾವಣ ತಿಂಗಳ ಎರಡನೇ ಸೋಮವಾರದ ಅಂಗವಾಗಿ ಜಾರ್ಖಂಡ್ ರಾಜ್ಯದ ಡಿಯೊಗಡ್ ಜಿಲ್ಲೆಯ ದೇವಸ್ಥಾನದ ಸಮೀಪ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತ ಘಟನೆಯಲ್ಲಿ, ಒಬ್ಬರು ಮಹಿಳೆ ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 30 ಜನರು ಗಾಯಗೊಂಡಿದ್ದಾರೆ.
‘ಹತ್ತು ಪುರುಷರು ಹಾಗೂ ಒಬ್ಬರು ಮಹಿಳೆ ಸೇರಿದಂತೆ 11 ಭಕ್ತರು ಸಾವನ್ನಪ್ಪಿದ್ದಾರೆ. ನಸುಕಿನ 4 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ’ ಎಂದು ಡಿಯೊಗಡ್ ಜಿಲ್ಲಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಘಟನೆ ವಿವರ: ಜಾರ್ಖಂಡ್ ರಾಜಧಾನಿ ರಾಂಚಿಯಿಂದ 350 ಕಿ.ಲೋ ಮೀಟರ್ ದೂರದ ಡಿಯೊಗಡ್ ಜಿಲ್ಲೆಯ ಬೆಲಬಾಗನ್‌ನಲ್ಲಿರುವ ದುರ್ಗಾ ದೇವಾಲಯದ ಸಮೀಪ ಈ ಅವಘಢ ಸಂಭವಿಸಿದೆ.
ಈ ಪ್ರಸಿದ್ಧ ದೇವಾಲಯದಲ್ಲಿ ಶ್ರಾವಣ ತಿಂಗಳ ಎರಡನೇ ಸೋಮವಾರ ಇಂದು ದರ್ಶನಕ್ಕಾಗಿ ಮಧ್ಯರಾತ್ರಿಯಿಂದಲೇ 4–5 ಕಿ.ಲೋ ಮೀಟರ್ ಸರತಿ ಸಾಲುಗಳಲ್ಲಿ ಜನರು ನಿಂತಿದ್ದರು. ಸಾಲು ಮುರಿದು ನುಗ್ಗಲು ಯತ್ನಿಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ಮತ್ತೊಂದೆಡೆ, ಇಂದು ಅಂದಾಜು 1.5 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ, ಪ್ರಧಾನಿ ಸಂತಾಪ: ಅವಘಢದಲ್ಲಿ ಅಸುನೀಗಿದವರ ಕುಟುಂಬಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್, ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಅಲ್ಲದೇ, ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ದಾಸ್ ಅವರಿಗೆ ಕರೆ ಮಾಡಿ ಘಟನೆಯ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಕೂಡ ಮಾಡಿದ್ದಾರೆ. ಮೋದಿ ಟ್ವೀಟ್ ಇಂತಿದೆ.
2 ಲಕ್ಷ ರೂಪಾಯಿ ಪರಿಹಾರ: ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಜಾರ್ಖಂಡ್ ಸರ್ಕಾರ ಪ್ರಕಟಿಸಿದೆ.
ಘಟನೆಯಲ್ಲಿ ಗಾಯಗೊಂಡಿವವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿಯೂ ಘೋಷಿಸಿದೆ.