ಪುಣೆ: ಕೇವಲ ಇನ್ಶೂರೆನ್ಸ್ ಹಣಕ್ಕಾಗಿ 13 ವರ್ಷದ ಹೆತ್ತ ಮಗನನ್ನು ತಾಯಿ ಬ್ಯಾಟ್ ನಿಂದ ಹೊಡೆದು ಕೊಂದಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಗುರುವಾರ ರಾತ್ರಿ 13 ವರ್ಷದ ಬಾಲಕ ಚೈತನ್ಯ ಬಲಪಾಂಡೆಯನ್ನು ತಾಯಿಯೇ ಬ್ಯಾಟಿನಿಂದ ಥಳಿಸಿ ಹತ್ಯೆ ಮಾಡಿದ್ದು, ತಾಯಿ ಮಗನ ಹೆಸರಿನಲ್ಲಿ ಮಾಡಿಸಲಾಗಿದ್ದ 10 ಲಕ್ಷ ರು. ಇನ್ಶೂರೆನ್ಸ್ ಹಣ ಪಡೆಯುವ ಸಲುವಾಗಿ ಆತನನ್ನು ಹತ್ಯೆ ಮಾಡಿರುವುದಾಗಿ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದು, ಗಂಡನಿಂದ ವಿಚ್ಚೇದನ ಕೋರಿದ್ದ 36 ವರ್ಷದ ರಾಖಿ ಬಲಪಾಂಡೆ 15 ವರ್ಷಗಳ ಹಿಂದೆ ತರುಣ್ ಎಂಬಾತನ ಜೊತೆ ರಾಖಿ ಬಲಪಾಂಡೆ ವಿವಾಹವಾಗಿದ್ದರು. ಇವರಿಗೆ ಚೈತನ್ಯ ಒಬ್ಬನೇ ಮಗ. ಮಗನನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದ್ದ ರಾಖಿ ಆತನಿಗೆ ದಿನನಿತ್ಯ ಹೊಡೆದು ಬಡಿದು ಊಟ ನೀಡದೆ ಹಿಂಸಿಸುತ್ತಿದ್ದಳು ಎನ್ನಲಾಗಿದೆ.
ತರುಣ್ ತಮ್ಮ ಮಗನ ಹೆಸರಿನಲ್ಲಿ 10 ಲಕ್ಷ ರು. ಗಳ ಇನ್ಶೂರೆನ್ಸ್ ಮಾಡಿಸಿದ್ದು, ಇದನ್ನು ಪಡೆಯುವ ಸಲುವಾಗಿಯೇ ಆಗಸ್ಟ್ 5 ರಂದು ಮಗನನ್ನು ತೀವ್ರವಾಗಿ ಥಳಿಸಿ ಹತ್ಯೆ ಮಾಡಿದ್ದಳೆನ್ನಲಾಗಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಮಗ ಬಾತ್ ರೂಮಿನಲ್ಲಿ ಬಿದ್ದು ಸಾವಿಗೀಡಾಗಿದ್ದಾನೆಂದು ತಿಳಿಸಿದ್ದಳು.
ಆದರೆ ಮೃತ ಬಾಲಕನ ಮೇಲಾಗಿದ್ದ ತೀವ್ರ ಸ್ವರೂಪದ ಗಾಯಗಳನ್ನು ನೋಡಿ ಅನುಮಾನಗೊಂಡ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ರಾಖಿಯ ಕೃತ್ಯ ಬಯಲಾಗಿದೆ. ಇದೀಗ ರಾಖಿ ಮತ್ತಾಕೆಯ ಪ್ರಿಯಕರ ಸುಮಿತ್ ಮೋರೆ ಜೈಲು ಪಾಲಾಗಿದ್ದಾರೆ.