ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಂಗಳವಾರ ರಾಜ್ಯಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ತಿದ್ದುಪಡಿ ವಿಧೇಯಕವನ್ನು ಮಂಡಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ‘ಗಾಂಧಿ’ಗಳು ತಮ್ಮ ಕುಟುಂಬದ ಹೊರತು ಬೇರೆಯವರು ಅಧಿಕಾರ ನಡೆಸುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಆಯ್ಕೆ ಸಮಿತಿ ವರದಿ ಬಂದ ನಂತರ ಜಿಎಸ್ಟಿ ತಿದ್ದುಪಡಿ ವಿಧೇಯಕ ಈ ಅಧಿವೇಶನದಲ್ಲೇ ಅಂಗೀಕಾರವಾಗಬೇಕು. ಆದರೆ ದುರಾದೃಷ್ಟ ಎಂದರೆ, ಕಾಂಗ್ರೆಸ್ ತಾನೇ ರೂಪುಗೊಳಿಸಿದ್ದ ಜಿಎಸ್ಟಿ ಕಾಯ್ದೆ ಜಾರಿಗೆ ತಾನೇ ಅಡ್ಡಿಪಡಿಸುತ್ತಿದೆ’ ಎಂದು ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೇವಲು ಸಂಸತ್ತಿಗೆ ಮಾತ್ರ ಅಡ್ಡಿಪಡಿಸುತ್ತಿಲ್ಲ. ಬದಲಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಜೇಟ್ಲಿ ಆರೋಪಿಸಿದರು.
ಆರ್ಥಿಕ ಸಮೀಕ್ಷೆಗಳ ಪ್ರಕಾರ, ಜಿಎಸ್ಟಿ ಜಾರಿಗೆ ಬಂದರೆ, ದೇಶದ ಜಿಡಿಪಿ ದರ ಹೆಚ್ಚಾಗಲಿದೆ. ಆದರೆ ಕಾಂಗ್ರೆಸ್ ತನ್ನ ಸ್ವಹಿತಾಸಕ್ತಿಗಾಗಿ ಇದನ್ನು ವಿರೋಧಿಸುತ್ತಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.