ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಐಪಿಎಲ್ ಹಗರಣದ ಆರೋಪಿ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಇಂಟರ್‌ಪೊಲ್ ನೋಟಿಸ್ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯ(ಇಡಿ) ಕೇಳಿಕೊಂಡಿದೆ.
ಪ್ರಕರಣ ಸಂಬಂಧ ಲಲಿತ್ ಮೋದಿ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದು, ಇದರ ಆಧಾರದ ಮೇಲೆ ಲಲಿತ್ ಮೋದಿಗೆ ‘ರೆಡ್ ಇಂಟರ್‌ಪೊಲ್ ನೋಟಿಸ್’ ನೀಡುವಂತೆ ಅಧಿಕೃತವಾಗಿ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಬಿಐ ವಕ್ತಾರರು, ಲಲಿತ್ ಮೋದಿ ವಿರುದ್ಧ ಇಂಟರ್‌ಪೊಲ್ ನೋಟಿಸ್ ಜಾರಿ ಮಾಡುವಂತೆ ಇಡಿ ಮನವಿ ಮಾಡಿಕೊಂಡಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2008ರ ಐಪಿಎಲ್ ಆವೃತ್ತಿಯ ಟೀವಿ ಪ್ರಸಾರದ ಹಕ್ಕನ್ನು ನೀಡಲು ಮತ್ತು ಪ್ರಸಾರ ಸಮಯ ಒಪ್ಪಂದಕ್ಕಾಗಿ 425 ಕೋಟಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಮೋದಿ ವಿರುದ್ಧ ಬಿಸಿಸಿಐ ದೂರು ದಾಖಲಿಸಿತ್ತು.
ಪ್ರಕರಣ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರು ಲಲಿತ್ ಮೋದಿ ಅವರು ಹಾಜರಾಗದಿರುವುದನ್ನು ಕಂಡ ಜಾರಿ ನಿರ್ದೇಶನಾಲಯವು ಲಲಿತ್ ಮೋದಿ ಅವರಿಗೆ ಜಾಮೀನು ರಹಿತ ಬಂಧನವಾರೆಂಟ್ ಜಾರಿ ಮಾಡುವಂತೆ ಕೋರಿ (ಇಡಿ) ಮುಂಬೈ ವಿಶೇಷ ನ್ಯಾಯಾಲಯದ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಕಳೆದ ವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು. ಇದೀಗ ಲಲಿತ್ ಮೋದಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.