ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಡಿ.ಎನ್.ಎ ಹೇಳಿಕೆ ವಿರುದ್ಧ ಶಬ್ಧ್ ವಾಪಸಿ ಚಳುವಳಿ ಹಮ್ಮಿಕೊಂಡಿರುವ ಜೆಡಿಯು ಕಾರ್ಯಕರ್ತರು, ಪ್ರಧಾನಿ ಮೋದಿಗೆ ತಮ್ಮ ಕೂದಲು ಹಾಗೂ ಉಗುರಿನ ಮಾದರಿಗಳನ್ನು ಕಳಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಡಿಎನ್ಎ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸುವ ನಿರೀಕ್ಷೆ ಇತ್ತು. ಆದರೆ ಪ್ರಧಾನಿಯಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಜೆಡಿಯು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಿಎನ್ಎ ಟೆಸ್ಟ್ ಗೆ ಅಗತ್ಯವಿರುವ ತಮ್ಮ ಕೂದಲು ಹಾಗೂ ಉಗುರುಗಳನ್ನು ಕಳಿಸಿಕೊಡಲು ಪ್ರಾರಂಭಿಸಿದ್ದಾರೆ ಎಂದು ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರ ಚುನಾವಣೆ ಸಂಬಂಧ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಿತೀಶ್ ಕುಮಾರ್ ನನ್ನೊಬ್ಬನಿಗೆ ಮಾತ್ರವೇ ಅಗೌರವ ಸೂಚಿಸಿಲ್ಲ. ಮಹಾದಲಿತರಾದ ಜಿತನ್ ರಾಮ್ ಮಾಂಝಿ ಅವರಿಗೂ ಈ ಹಿಂದೆ ಅಗೌರವ ಸೂಚಿಸಿದ್ದಾರೆ. ಇಲ್ಲಿರುವ ಜನತೆಯ ಡಿಎನ್ಎಗೂ ನಿತೀಶ್ ಕುಮಾರ್ ಅವರ ಡಿಎನ್ ಎಗೂ ಸಾಕಷ್ಟು ವ್ಯತ್ಯಾಸವಿದ್ದು, ಅವರ ಡಿಎನ್ಎಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಹೇಳಿದ್ದರು. ಮೋದಿ ಡಿಎನ್ಎ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ನಿತೀಶ್ ಕುಮಾರ್ ಹಾರ ಜನತೆಯ ರಕ್ತ ಸ್ಯಾಂಪಲ್ ನ್ನು ಮೋದಿ ಅವರಿಗೆ ಕಳುಹಿಸಿಕೊದಲಾಗುವುದು ಎಂದು ಹೇಳಿದ್ದರು. ಡಿಎನ್ಎ ಪರೀಕ್ಷೆಗಾಗಿ ಜೆಡಿಯು ಕಾರ್ಯಕರ್ತರು ಕೂದಲು ಹಾಗೂ ಉಗುರಿನ ಮಾದರಿಗಳನ್ನು ಕಳಿಸಿಕೊಡುತ್ತಿದ್ದಾರೆ.