ಹೊಸದಿಲ್ಲಿ: ‘ಸುಷ್ಮಾ ಉತ್ತರಿಸಿದಲ್ಲಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡಲಾಗುವುದು,’ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಗದ್ದಲದ ನಡುವೆಯೇ ಪ್ರತ್ಯುತ್ತರ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬೋಫೋರ್ಸ್ ಹಗರಣ ಹಾಗೂ ಭೋಪಾಲ್ ಅನಿಲ ದುರಂತಕ್ಕೆ ಕಾರಣರಾದವರನ್ನು ದೇಶದಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟ ಗಾಂಧಿ ಕುಟುಂಬದ ನಡೆಯನ್ನು ಪ್ರಶ್ನಿಸಿ, ತನ್ನ ಕುಟುಂಬವನ್ನು ಸಮರ್ಥಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿಗೆ ರಜೆಯಲ್ಲಿ ತೆರಳುವಂತೆ ಹೇಳಿ, ತಮ್ಮ ಪರಿವಾರದ ಇತಿಹಾಸವನ್ನು ತಿಳಿದುಕೊಳ್ಳಲು ಸುಷ್ಮಾ ಸಲಹೆ ನೀಡಿದರು. ಮರಳಿ ಬಂದು ಅಮ್ಮಾ ಸೋನಿಯಾಗೆ, ‘ಕ್ವಟ್ರೋಚಿಯಿಂದ ನಾವು ಎಷ್ಟು ಹಣ ಪಡೆದುಕೊಂಡಿದ್ದೇವೆ? ಪಾತಕಿ ಆ್ಯಂಡರ್ಸನ್ನನ್ನು ಭಾರತದಿಂದ ಪರಾರಿಯಾಗಲು ಬಿಟ್ಟಿದ್ದೇಕೆ? ಆ್ಯಂಡರ್ಸನ್ ಬಿಟ್ಟು ಅದೀಲ್ ಶರ್ಯಾಂರ್ನನ್ನು ಬಿಡಿಸಿಕೊಂಡು ಬಂದಿದ್ದೇಕೆ?,’ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಹೇಳಿದ್ದಾರೆ.
‘ರಾಜೀವ್ ಗಾಂಧಿ ಸರಕಾರದಲ್ಲಿ ಆ್ಯಂಡರ್ಸನ್ಗೆ, ನಂತರ ಯುಪಿಎ ಸರಕಾರದಲ್ಲಿ ಕ್ವಟ್ರೋಚಿಯನ್ನು ದೇಶ ಬಿಟ್ಟು ಹೋಗಲು ‘ರಹಸ್ಯ’ವಾಗಿ ನೆರವು ನೀಡಲಾಗಿತ್ತೇ ಹೊರತು, ನಾನು ಯಾವುದೇ ‘ರಹಸ್ಯ’ ಕಾರ್ಯದಲ್ಲಿಯೂ ತೊಡಗಿಲ್ಲ. ಅಷ್ಟಕ್ಕೂ ಲಲಿತ್ ಮೋದಿಯನ್ನು ಯಾವುದೇ ದೇಶವೂ ತಲೆಮರೆಸಿಕೊಂಡ ಆರೋಪಿ ಎಂದು ಹೇಳಿಲ್ಲ,’ ಎಂಬುದನ್ನು ಸುಷ್ಮಾ ಸ್ಪಷ್ಟಪಡಿಸಿದ್ದಾರೆ.
‘ನನ್ನ ಪತಿಯಾಗಲೀ, ಮಗಳಾಗಲೀ, ಲಲಿತ್ ಮೋದಿ ಪರ ವಕಾಲತ್ತಿಗೆ ನಯಾ ಪೈಸೆಯನ್ನೂ ಪಡೆದಿಲ್ಲ’, ಎಂದು ಕಾಂಗ್ರೆಸ್ ಗದ್ದಲದ ನಡುವೆಯೇ ಲಲಿತ್ ಗೇಟ್ಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯಲು ಸುಷ್ಮಾ ಯತ್ನಿಸಿದರು.