ಮಧ್ಯ ಪ್ರದೇಶ: ಇದು ನಂಬಲು ಕಷ್ಟವಾದರೂ ನಡೆದ ಸತ್ಯ ಘಟನೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ಶಿಕ್ಷಕನೊಬ್ಬ ಟಿವಿ ಧಾರಾವಾಹಿಯ ಕಾರಣಕ್ಕಾಗಿ ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದಾನೆ.
ಮಧ್ಯ ಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ರಾತ್ರಿ ತನ್ನ ಪೋಷಕರೊಂದಿಗೆ 10 ವರ್ಷದ ಬಾಲಕಿ ಟಿವಿ ಧಾರಾವಾಹಿ ನೋಡುತ್ತಿದ್ದ ವೇಳೆ ಅತ್ಯಾಚಾರ ಕುರಿತಾದ ಪ್ರಸಂಗವೊಂದು ಅದರಲ್ಲಿ ಪ್ರಸಾರವಾಗಿದೆ. ಅದನ್ನು ನೋಡುತ್ತಿದ್ದಂತೆಯೇ ಥರಗುಟ್ಟಿದ ಬಾಲಕಿ ಓಡಿ ಹೋಗಿ ತನ್ನ ರೂಮಿನ ಕದ ಹಾಕಿಕೊಂಡಿದ್ದಾಳೆ.
ಇದರಿಂದ ಗಾಬರಿಗೊಳಗಾದ ಪೋಷಕರು ಬಾಲಕಿಯ ಮನವೊಲಿಸಿ ಬಾಗಿಲು ತೆಗೆಸಿದ ವೇಳೆ ಆಕೆ ಭಯದಿಂದ ನಡುಗುತ್ತಾ ಅಳುತ್ತಿರುವುದು ಕಂಡು ಬಂದಿದೆ. ಆಕೆಯನ್ನು ಸಮಾಧಾನಗೊಳಿಸಿ ವಿಚಾರಿಸಿದಾಗ ತಿಂಗಳ ಹಿಂದೆ ಆಕೆಯ ಮೇಲೆ ಧ್ಯಾನ ಹೇಳಿ ಕೊಡುತ್ತಿದ್ದ ಶಿಕ್ಷಕ 33 ವರ್ಷದ ಮಹೇಶ್ ಕೊರ್ವಾನಿ ಎಂಬಾತ ಅತ್ಯಾಚಾರವೆಸಗಿರುವ ಸಂಗತಿ ತಿಳಿದುಬಂದಿದೆ. ಅಲ್ಲದೇ ವಿಷಯ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಆತ ಬೆದರಿಸಿರುವ ಸಂಗತಿ ಬಯಲಾಗಿದೆ.
ಪೋಷಕರು ಇದೀಗ ಧ್ಯಾನ ಮಂದಿರದ ಶಿಕ್ಷಕನ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತೀವ್ರ ಆಘಾತಕ್ಕೊಳಗಾಗಿರುವ ಬಾಲಕಿಗೆ ಈಗ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.