ಹೊಸದಿಲ್ಲಿ: ಸದನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆಗಳನ್ನು ಟೀಟಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ‘ವಿಷಯ ಜ್ಞಾನವಿಲ್ಲದ ಮಾತಿನ ಚತುರ,’ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.
ಜೇಟ್ಲಿ ಮಾತನಾಡಲು ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದರಿಂದ, ಸುಷ್ಮಾ ವಿರುದ್ಧ ಮಂಡಿಸಿದ ನಿಲುವಳಿ ಸೂಚನೆಗೆ ಧ್ವನಿ ಮತದ ಮೂಲಕ ಸೋಲಾಯಿತು.
‘ಲಲಿತ್ ಮೋದಿ ವಿಷಯವಾಗಿ ಸುಷ್ಮಾ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಿಗಳಲ್ಲಿ ಹುರುಳಿಲ್ಲ. ಈ ಆರೋಪಗಳನ್ನು ಸರಕಾರ ಸಂಪೂರ್ಣ ತಳ್ಳಿ ಹಾಕಿದ್ದು, ಸುಷ್ಮಾ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ,’ ಎಂದು ಸದನಕ್ಕೆ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
‘ಗಾಂಧೀಜಿ ಹೇಳಿದ ಮೂರು ಮಂಗಗಳ ಕಥೆಯನ್ನು ಪ್ರಧಾನಿ ಮೋದಿ, ಸತ್ಯವನ್ನು ನೋಡಬೇಡ, ಸತ್ಯವನ್ನು ಕೇಳಬೇಡ, ಸತ್ಯವನ್ನು ಮಾತನಾಡಬೇಡ, ಎಂಬುದಾಗಿ ಬದಲಾಯಿಸಿದ್ದಾರೆ,’ ಎಂಬ ರಾಹುಲ್ ಹೇಳಿಕೆಗೆ ಉತ್ತರಿಸಿರುವ ಜೇಟ್ಲಿ, ‘ರಾಹುಲ್ ಸದಾ ಮೂರು ಮಂಗಗಳನ್ನು ಉಲ್ಲೇಖಿಸುತ್ತಾರೆ. ಹಾಗೆ ಮಾಡುತ್ತಲೇ ದೇಶವನ್ನು ಮಂಗ ಮಾಡುವುದು ಬೇಡ,’ ಎಂದು ಕಿವಿಮಾತು ಹೇಳಿದರು.
‘ಯುಪಿಎ ಸರಕಾರ ಕೇವಲ ತೆಳು ನೀಲಿ ಕಾರ್ನರ್ ನೋಟಿಸ್ ಮಾತ್ರ ಮೋದಿ ವಿರುದ್ಧ ವಿಧಿಸಿತ್ತು,’ ಎಂದು ಜೇಟ್ಲಿ ಸದನಕ್ಕೆ ತಿಳಿಸಿದ್ದಾರೆ.