ಜಮ್ಮು: ತಮ್ಮನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಉಗ್ರನನ್ನೇ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ಧೀರ ಯುವಕರನ್ನು ಜಮ್ಮು ಕಾಶ್ಮೀರ್ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗಿದೆ.
ಮೊಹಮ್ಮದ್ ನವೀದ್‌ನನ್ನು ಜೀವಂತವಾಗಿ ಬಂಧಿಸಲು ಯಶಸ್ವಿಯಾಗಿದ್ದ ಗ್ರಾಮಸ್ಥರಾದ ರಾಕೇಶ್ ಕುಮಾರ್ ಶರ್ಮ ಮತ್ತು ಬಿಕ್ರಂಜಿತ್ ಸಿಂಗ್ ಅವರು ಮಂಗಳವಾರ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾರೆ.
‘ಗ್ರಾಮಸ್ಥರಿಬ್ಬರ ಧೈರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಇಲಾಖೆಗೆ ನೇಮಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಅವರಿಗೆ ಶೌರ್ಯಚಕ್ರ ಪ್ರದಾನ ಮಾಡುವುದಕ್ಕೂ ಶಿಫಾರಸು ಮಾಡಲಾಗಿದೆ’, ಎಂದು ಪೊಲೀಸ್ ಮಹಾನಿರ್ದೇಶಕರಾದ ಕೆ. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಇತ್ತೀಚಿಗೆ ಜಮ್ಮು ಕಾಶ್ಮೀರದ ಉಧಂಪುರ್‌ನಲ್ಲಿ ಮೂವರು ಉಗ್ರರು ಬಿಎಸ್ಎಫ್ ಯೋಧರ ಮೇಲೆ ದಾಳಿ ನಡೆಸಿದ್ದರು. ಈ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಸಾವನ್ನಪ್ಪಿ ಓರ್ವ ಉಗ್ರ ಬಲಿಯಾಗಿದ್ದ. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಒತ್ತೆಯಾಳುಗಳೇ ಮತ್ತೊಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದುಬಿಟ್ಟಿದ್ದರು.
ಭಯೋತ್ಪಾದಕ ಮೊಹಮ್ಮದ್ ನಾವೇದ್ ಯಾಕೂಬ್‌ನನ್ನು ಜಮ್ಮುವಿನ ನ್ಯಾಯಾಲಯ ಮಂಗಳವಾರ 14 ದಿನಗಳ ಮಟ್ಟಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಶಕ್ಕೆ ನೀಡಿದೆ.