ನವದೆಹಲಿ: ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷವಾದ ಬಿಜೆಪಿ ಸದಸ್ಯರ ಸಂಖ್ಯೆ 11 ಕೋಟಿ ದಾಟಿದೆ.ಪ್ರಾದೇಶಿಕ ಪಕ್ಷಗಳ ಸರಕಾರವಿರುವ ರಾಜ್ಯಗಳಲ್ಲಿ ಸದಸ್ಯತ್ವವನ್ನು ಹೆಚ್ಚಿಸಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ.
ರಾಷ್ಟ್ರೀಯ ತರಬೇತಿ ಕಾರ್ಯಕ್ರಮವಾದ ಮಹಾ ಪ್ರಶಿಕ್ಷಣ ಅಭಿಯಾನದಲ್ಲಿ ಸದಸ್ಯರ ಸಂಖ್ಯೆ 11 ಕೋಟಿಗೆ ತಲುಪಿದೆ. ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವುದು ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ಹೇಳಿಕೆ ನೀಡಿದೆ.
15 ಲಕ್ಷ ತರಬೇತಿ ಪಡೆದ ಸದಸ್ಯರು ಸದಸ್ಯರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಮಾರ್ಗದರ್ಶನ ಪಡೆದ ಸದಸ್ಯರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ, ಆಸ್ಸಾಂ, ಓರಿಸ್ಸಾ, ಆಂಧ್ರಪ್ರದೇಶ, ತೆಲಂಗಾಣಾ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳಿಧರ್ ರಾವ್ ತಿಳಿಸಿದ್ದಾರೆ.
ಬಿಜೆಪಿ ಹಲವಾರು ರಾಜ್ಯಗಳಲ್ಲಿ ವಿಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವನ್ನು ನಿಧಾನವಾಗಿ ಹಿಂದಕ್ಕೆ ತಳ್ಳಿ ವಿಪಕ್ಷವಾಗಿ ಹೊರಹೊಮ್ಮುತ್ತಿದೆ. ಮುಂಬರುವ 10 ವರ್ಷಗಳಲ್ಲಿ ಬಿಜೆಪಿ ಬೃಹತ್ ಪಕ್ಷವಾಗಿ ವಿಶ್ವದ ಮುಂದೆ ಬರಲಿದೆ ಎಂದರು.