ಹೈದರಾಬಾದ್: 17 ವರ್ಷದ ಮನೆ ಕೆಲಸದಾಕೆ ಮೇಲೆ ಅಪ್ಪ- ಮಗ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಆಕೆಯೀಗ 7 ತಿಂಗಳ ಗರ್ಭಿಣಿಯಾಗಿದ್ದಾಳೆಂದು ಹೇಳಲಾಗಿದೆ.
ರಂಗಾರೆಡ್ಡಿ ಜಿಲ್ಲೆಯ ಬಶೀರಾಬಾದ್ ಮಂಡಲ್ ನಿವಾಸಿ ಕಾಶಪ್ಪ ಗೌಡ್ ಎಂಬಾತನ ಮನೆಯಲ್ಲಿ ಈ ಅಪ್ರಾಪ್ತ ಬಾಲಕಿ ಮನೆ ಕೆಲಸ ಮಾಡಿಕೊಂಡಿದ್ದಳೆಂದು ತಿಳಿದುಬಂದಿದೆ. ಕಾಶಪ್ಪ ಗೌಡ್ ನ ಮಗ ಅಶೋಕ್ ಕುಮಾರ್ ಗೌಡ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದನೆಂದು ಹೇಳಲಾಗಿದೆ.
ಕಾಶಪ್ಪ ಗೌಡ್ ಕಾರ್ಯ ನಿಮಿತ್ತ ತನ್ನ ಮಗ ಅಶೋಕ್ ಕುಮಾರನನ್ನು ಪರ ಊರಿಗೆ ಕೆಲ ದಿನಗಳ ಕಾಲ ಕಳುಹಿಸಿದ್ದು, ಆಗ ಅಪ್ರಾಪ್ತ ಬಾಲಕಿ ಅಶೋಕ್ ಕುಮಾರ್ ಗೌಡ್ ನ ಕುರಿತು ಆತನ ತಂದೆಯ ಬಳಿ ವಿಚಾರಿಸಿದ್ದಳೆಂದು ಹೇಳಲಾಗಿದೆ. ಆಕೆಯೊಂದಿಗೆ ತನ್ನ ಮಗ ಸಂಬಂಧ ಹೊಂದಿರುವುದನ್ನು ಅರಿತ ಕಾಶಪ್ಪ ಗೌಡ್ ಇದನ್ನು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆಂದು ತಿಳಿದುಬಂದಿದೆ.
ಅಪ್ರಾಪ್ತ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪ್ಪ- ಮಗನನ್ನು ಈಗ ಬಂಧಿಸಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.